
ನಾವು ದಿನ ಬೆಳಿಗ್ಗೆ ಹೇಗೆ ದಿನವನ್ನು ಶುರು ಮಾಡುತ್ತೇವೆ ಎನ್ನುವುದರ ಮೇಲೆ ಇಡಿ ದಿನ ನಿಂತಿರುತ್ತದೆ. ನಾವು ದಿನ ಬೆಳಿಗ್ಗೆ ಯಾವ ಆಹಾರವನ್ನು ಸೇವಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ. ಹೀಗಾಗಿ ದಿನ ಬೆಳಗಾದರೆ ಆರೋಗ್ಯಯುತವಾದ ಉಪಾಹಾರವನ್ನು ಸೇವಿಸಬೇಕು ವಿನಃ ಅತ್ಯಂತ ಸುಲಭವಾಗಿ ಸಿಗುವ ರೆಡಿಮೇಡ್ ಫುಡ್ ಅಥವಾ ಜಂಕ್ ಫುಡ್ ಅನ್ನು ತಿನ್ನಬಾರದು. ಅದರಲ್ಲಿಯೂ ಇಂದಿನ ಆಧುನಿಕ ದಿನಮಾನದಲ್ಲಿ ಹೆಚ್ಚಿನವರು ತಿನ್ನುವುದು ಬ್ರೆಡ್ ಜಾಮ್. ಆದರೆ ಇದು ಅರೋಗ್ಯಕ್ಕೆ ಒಳ್ಳೆಯದಲ್ಲ.
ಈ ಅವಸರದ ಬ್ರೇಕ್‌ಫಾಸ್ಟ್ಗಳಲ್ಲಿ ಒಂದು ಬ್ರೆಡ್. ಇದನ್ನೇ ಅಭ್ಯಾಸ ಮಾಡುತ್ತಾ ಹೋದರೆ ನಂತರ ಅವರು ಅನಾರೋಗ್ಯಕ್ಕೆ ಒಳಗಾಗುವುದು ಖಚಿತ. ನೀವು ಬೆಳಗಿನ ಉಪಾಹಾರಕ್ಕಾಗಿ ಬ್ರೆಡ್ ಸೇವಿಸಿದರೆ ಮುಂದೆ ನೀವು ಯಾವೆಲ್ಲಾ ಅನಾರೋಗ್ಯ ಸಮಸ್ಯೆ ಎದುರಿಸಬಹುದು ಎಂದು ಮಾಹಿತಿ ಕೊಡ್ತೀವಿ ಮುಂದೆ ಓದಿ..
ಮಲಬದ್ಧತೆ: ಬಿಳಿ ಬ್ರೆಡ್ ಹೊಟ್ಟು ಮುಕ್ತವಾಗಿದೆ, ಅತ್ಯಲ್ಪ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಆಹಾರದ ನಿಧಾನ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನಿತ್ಯವೂ ಬ್ರೆಡ್ ಸೇವನೆ ಮಾಡಿದರೆ ಮುಂದೆ ಮಲಬದ್ಧತೆ ಸಮಸ್ಯೆ ಬರಲು ಇದೇ ಕಾರಣವಾಗಬಹುದು.
ಬೊಜ್ಜು: ಆರೋಗ್ಯದ ಬಗ್ಗೆ ಅನೇಕ ಸಂಶೋಧನೆಗಳು ಹೇಳುತ್ತವೆ ತೂಕ ಇಳಿಸಿಕೊಳ್ಳಲು ಬಯಸುವ ಜನರು ತಮ್ಮ ಆಹಾರದಿಂದ ಬಿಳಿ ಬ್ರೆಡ್ ಅನ್ನು ಕಡಿತಗೊಳಿಸಬೇಕು ಎಂದು. ಬಿಳಿ ಬ್ರೆಡ್ ಸೇವನೆಯು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ತ್ವರಿತವಾಗಿ ಕಡಿಮೆಯಾದಾಗ, ವ್ಯಕ್ತಿಯು ಹೆಚ್ಚು ಹಸಿವನ್ನು ಅನುಭವಿಸುತ್ತಾನೆ ಮತ್ತು ಅವನು ಮತ್ತೆ ಮತ್ತೆ ತಿನ್ನುತ್ತಾನೆ. ಇದರಿಂದ ಅವರ ಬೊಜ್ಜು ಹೆಚ್ಚುತ್ತದೆ.
ಹೊಟ್ಟೆ ಕೆಡುವುದು: ಪ್ರತಿದಿನ ಬ್ರೆಡ್ ತಿನ್ನುವುದರಿಂದ, ವ್ಯಕ್ತಿಯ ಹೊಟ್ಟೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಬಿಳಿ ಬ್ರೆಡ್ ಹೆಚ್ಚು ಪಿಷ್ಟದ ಉತ್ಪನ್ನವಾಗಿದೆ. ಕಂದು ಬ್ರೆಡ್ಗಿಂತ ಭಿನ್ನವಾಗಿ, ಇದು ಫೈಬರ್ ಅನ್ನು ಹೊಂದಿರುವುದಿಲ್ಲ. ಇದಲ್ಲದೆ ಬಿಳಿ ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದ ಗ್ಲುಟನ್ ಕಂಡುಬರುತ್ತದೆ, ಇದು ಹೊಟ್ಟೆಗೆ ಸಂಬAಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆ ನೋವು, ಭೇದಿ, ವಾಂತಿ ಮುಂತಾದ ಸಮಸ್ಯೆಗಳು ಉದ್ಭವಿಸಬಹುದು. ಹೀಗಾಗಿ ಬೆಳಗಿನ ಉಪಹಾರದಲ್ಲಿ ಸಾಕಷ್ಟು ಆರೋಗ್ಯಕರವಾದ ಸೇವಿಸುವುದು ಉತ್ತಮ.
