
ಎಲ್ಲವೂ ಕಂಪ್ಯೂಟರ್ ಮಯವಾಗಿರುವಂತಹ ಇಂದಿನ ದಿನಮಾನದಲ್ಲಿ ಮಾನವನ ಆಹಾರ ಪದ್ಧತಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಆತನು ತಿನ್ನುವ ಆಹಾರ ಅನಾರೋಗ್ಯಕರವಾಗಿದ್ದು, ಅತ್ಯಂತ ಸುಲಭವಾಗಿ ಮಾಡಿಕೊಳ್ಳುವ ವಿಧಾನವನ್ನು ಆತ ಕಂಡುಕೊಂಡಿರುತ್ತಾನೆ. ಅಲ್ಲದೇ ಆತ ಕೆಲಸಕ್ಕೆ ಹೆಚ್ಚಿನ ಒತ್ತು ಕೊಡುವುದರಿಂದ ಆಹಾರ ಸೇವನೆಗೂ ಸಮಯವಿಲ್ಲದೆ ಊಟ, ತಿಂಡಿ ಯಾವುದನ್ನೂ ಸರಿಯಾಗಿ ಮಾಡದೇ ಅಸಿಡಿಟಿ ಸಮಸ್ಯೆಯನ್ನು ಎದುರಿಸುತ್ತಾನೆ. ಈ ಸಮಸ್ಯೆಯಿಂದ ದೂರ ಇರಲು ಕೆಲವೊಂದು ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದಂತಹ ಅನೇಕ ಆಹಾರ ಪದಾರ್ಥಗಳಿವೆ. ಇವುಗಳಲ್ಲಿ ಮಸಾಲೆಯುಕ್ತ ವಸ್ತುಗಳು, ಬಿಸಿ ಕಾಫಿ, ಎಣ್ಣೆಯುಕ್ತ ಆಹಾರ, ಚಾಕೊಲೇಟ್, ಇತ್ಯಾದಿ. ಈ ವಿಷಯಗಳಿಂದ ದೂರವಿರುವುದು ಉತ್ತಮ.
ಬೆಳಗ್ಗೆ ಎದ್ದ ಬಳಿಕ ನೀವು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುತ್ತಿದ್ದರೆ ಮೊದಲು ಅದನ್ನು ನಿಲ್ಲಿಸಿ. ಇದೂ ಕೂಡ ಆಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಿದರೆ, ಪಿತ್ತರಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಸಿಡಿಟಿ, ವಾಕರಿಕೆ ಸಮಸ್ಯೆಗಳು ಕಂಡುಬರುತ್ತವೆ. ಬೆಳಿಗ್ಗೆ ಚಹಾವಿಲ್ಲದೆ ಬದುಕಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಚಹಾದೊಂದಿಗೆ ಶುಂಠಿಯನ್ನು ಬೆರೆಸಿ ಕುಡಿಯಬಹುದು. ಇದು ಆಸಿಡಿಟಿ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಬೆಳಗಿನ ಉಪಾಹಾರದಲ್ಲಿ ಓಟ್ ಮೀಲ್ ಅನ್ನು ಸೇರಿಸಿ, ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟುಮಾಡುವುದಿಲ್ಲ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಹ ಉತ್ತಮವಾಗಿರುತ್ತದೆ. ಬೆಳಗ್ಗೆ ಬೇಯಿಸಿದ ಮೊಟ್ಟೆ ತಿಂದರೆ ಹೊಟ್ಟೆಯ ಸಮಸ್ಯೆ ಇರುವುದಿಲ್ಲ. ಹಸಿರು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು, ಆದ್ದರಿಂದ ನೀವು ಇದನ್ನು ಪ್ರತಿದಿನ ಬೆಳಿಗ್ಗೆ ತಿನ್ನಬಹುದು.
