
ಇಂದಿನ ದಿನಮಾನದಲ್ಲಿ ಕುಳಿತುಕೊಂಡೇ ಕೆಲಸ ಮಾಡುವುದರಿಂದ ದೇಹಕ್ಕೆ ಸರಿಯಾಗಿ ವ್ಯಾಯಾಮ ಸಿಗುವುದಿಲ್ಲ. ಹೀಗಾಗಿ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಕೆಲಸದ ಒತ್ತಡವಿದ್ದಾಗ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಕೆಲಸದ ಟೆನ್ಷನ್‌ನಿಂದ ಎಷ್ಟೋ ಬಾರಿ ನಿದ್ರಾಹೀನತೆ ಕೂಡ ಉಂಟಾಗುತ್ತದೆ. ಮಾನವ ಆರೋಗ್ಯವಾಗಿರುಲು ನಿದ್ದೆ ಬಹಳ ಮುಖ್ಯವಾಗುತ್ತದೆ. ಚೆನ್ನಾಗಿ ನಿದ್ದೆ ಮಾಡಿದ್ರೆ ನಮ್ಮ ದಿನದ ಆಯಾಸವೆಲ್ಲ ಕಡಿಮೆಯಾಗಿ ದೇಹ ಮತ್ತು ಮನಸ್ಸು ಉಲ್ಲಾಸವಾಗಿರುತ್ತದೆ. ಆದರೆ ಅಗತ್ಯವಿರುವಷ್ಟು ನಿದ್ದೆ ಮಾಡದಿದ್ದರೆ ಬೇರೆ ಸಮಸ್ಯೆಗಳ ಜೊತೆಗೆ ನಿಮ್ಮ ತೂಕ ಕೂಡ ಹೆಚ್ಚಾಗುತ್ತದೆ.
ನೀವು ಪ್ರತಿದಿನ ಚೆನ್ನಾಗಿ ನಿದ್ದೆ ಮಾಡಿದರೆ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನಿದ್ರೆಯ ಕೊರತೆಯಿಂದಾಗಿ ನಿಮ್ಮ ದೇಹದ ಚಯಾಪಚಯ ಕ್ರಿಯೆಯು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದು ಸಾರ್ವಕಾಲಿಕ ಆಯಾಸ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವೇ ತೂಕದಲ್ಲಿ ಹೆಚ್ಚಳವಾಗುವುದು.
ನಿದ್ರೆಯ ಕೊರತೆಯಿಂದ ದೇಹದಲ್ಲಿ ಗ್ರೆಲಿನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದರಿಂದಲೂ ತೂಕ ಹೆಚ್ಚಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಗ್ರೆಲಿನ್ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ. ಪರಿಣಾಮ ಇಡೀ ದಿನ ನೀವು ಜಂಕ್ ಫುಡ್ ಸೇವಿಸುವ ಸಾಧ್ಯತೆ ಹೆಚ್ಚು. ಚೆನ್ನಾಗಿ ನಿದ್ದೆ ಆಗದೇ ಇದ್ದಾಗ ಬೆಳಗ್ಗೆ ವ್ಯಾಯಾಮ ಮಾಡಲು ಉತ್ಸಾಹವೇ ಇರುವುದಿಲ್ಲ.
ವ್ಯಾಯಾಮದಿಂದ ದೂರ ಓಡಿದ್ರೆ ಸಹಜವಾಗಿಯೇ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಆಲಸ್ಯ ಅಥವಾ ಆಯಾಸವನ್ನು ದೂರ ಮಾಡಲು 7-8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಡೀಪ್ ಸ್ಲೀಪರ್‌ಗಳು ಮರುದಿನ ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಉಲ್ಲಾಸದಿಂದ ಇರುತ್ತಾರೆ. ಸರಿಯಾಗಿ ನಿದ್ದೆ ಮಾಡದಿದ್ದರೆ ದಿನವಿಡೀ ಆಲಸ್ಯ ಮತ್ತು ಆಯಾಸವನ್ನು ಅನುಭವಿಸಬೇಕಾಗುತ್ತದೆ.
