
ಸಾಮಾನ್ಯವಾಗಿ ಹಾಲಿಗೆ ಸಕ್ಕರೆಯನ್ನು ಹಾಕಿ ಕುಡಿಯುವುದನ್ನು ನಾವು ನೋಡುತ್ತೇವೆ. ಆದರೆ, ಬೆಲ್ಲ ಸಕ್ಕರೆಗಿಂತ ಹೆಚ್ಚು ಆರೋಗ್ಯಕರ, ರುಚಿಕರ ಮತ್ತು ಪೌಷ್ಠಿಕವಾಗಿದೆ. ಹೀಗಾಗಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಬೆಲ್ಲವನ್ನು ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಹಲವು ಲಾಭಗಳು ಸಿಗುತ್ತವೆ. ಬೆಲ್ಲದ ಸೇವನೆ ಶರೀರದಿಂದ ಹಲವು ರೋಗಗಳನ್ನು ತೊಲಗಿಸುತ್ತದೆ ಎನ್ನಲಾಗುತ್ತದೆ. ಬೆಲ್ಲ ಸೇವಿಸಿ ಯಾವ ಯಾವ ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ…
ಬೆಲ್ಲ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ನಿಮಗೆ ತಿಳಿದಿರಬಹುದು ಮತ್ತು ಕೆಲವು ನಿಮಗೆ ತಿಳಿಯದೇ ಇರಬಹುದು. ದೇಸಿ ಸೂಪರ್‌ಫುಡ್ ಎಂದೇ ಕರೆಯಲಾಗುವ ಬೆಲ್ಲವನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ, ಅದರ ಪ್ರಯೋಜನಗಳು ಅನೇಕ ಪಟ್ಟು ಹೆಚ್ಚಾಗುತ್ತವೆ ಎನ್ನಲಾಗುತ್ತದೆ.
ಹಾಲಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ. ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ನಿದ್ರೆ ನಿಮ್ಮದಾಗುತ್ತದೆ. ಚಯಾಪಚಯ ದರವನ್ನು ವೇಗಗೊಳಿಸಿ, ಉತ್ತಮ ನಿದ್ರೆಗೆ ಇದು ಸಹಾಯ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು, ತಮ್ಮ ಆಹಾರದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವಂತಹ ಪದಾರ್ಥಗಳನ್ನು ಸೇವಿಸಬೇಕು. ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ರಕ್ತದಲ್ಲಿನ ಹಿಮೊಗ್ಲೋಬಿನ್ ಕೊರತೆಯನ್ನು ನೀಗಿಸುತ್ತದೆ.
ನೀವು ಪ್ರತಿದಿನ ಹಾಲಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿದರೆ ನಿಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ. ಹಾಲಿನಲ್ಲಿ ಬೆಲ್ಲ ಹಾಕಿ ಕುಡಿಯುವುದರಿಂದ, ಶರೀರದಲ್ಲಿ ಉಂಟಾಗುವ ಹಲವು ನೋವನ್ನು ನಿವಾರಣೆಯಾಗುತ್ತವೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಬೆಚ್ಚಗಿನ ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಅವರಿಗೆ ಹಲವು ರೀತಿಯ ಪ್ರಯೋಜನಗಳು ಲಭಿಸುತ್ತವೆ.
