
ಓಮದ ಕಾಳನ್ನು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುತ್ತಾರೆ. ಈ ಮಸಾಲ ಪದಾರ್ಥ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಅನಾದಿಕಾಲದಿಂದಲೂ ಇದನ್ನು ಉತ್ತಮ ಮನೆಮದ್ದಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಇದರಿಂದ ಅನೇಕ ಉಪಯೋಗಗಗಳಿವೆ. ಓಮದ ಕಷಾಯ ಕೂಡ ನಮ್ಮನ್ನು ಆರೋಗ್ಯವಾಗಿಡುವಲ್ಲಿ ಸಹಕರಿಸುತ್ತದೆ. ಹೊಟ್ಟೆಗೆ ಸಂಬಧಿಸಿದ ಸಮಸ್ಯೆಗಳಿಂದ ದೂರವಿರಲು ಓಮದ ಕಷಾಯ ಸೇವನೆ ಉತ್ತಮ.
ಓಮ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ತೂಕ ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ. ಓಮದಲ್ಲಿ ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣಾಂಶಗಳೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ನೀವು ಖಾಲಿ ಹೊಟ್ಟೆಯಲ್ಲಿ ಓಮದ ಕಷಾಯ ಕುಡಿಯಬೇಕು. ಹೀಗೆ ಮಾಡಿದರೆ ಉದರ ಶೂಲೆಯನ್ನು ಹೋಗಲಾಡಿಸಬಹುದು.
ನಿಮಗೆ ಯಾವುದೇ ರೀತಿಯ ಹೊಟ್ಟೆನೋವಿನ ಸಮಸ್ಯೆ ಇದ್ದರೆ ಓಮದ ಕಷಾಯ ಕುಡಿಯುವುದರಿಂದ ಅದು ನಿವಾರಣೆಯಾಗುತ್ತದೆ. ಇದಲ್ಲದೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಕೂಡ ಓಮ ರಾಮಬಾಣವಿದ್ದಂತೆ. ಊಟಕ್ಕೂ ಅರ್ಧಗಂಟೆ ಮೊದಲು ಓಮದ ಕಷಾಯ ಸೇವಿಸಿದರೆ ಗ್ಯಾಸ್ ನಿವಾರಣೆಯಾಗುತ್ತದೆ. ಹೆಣ್ಣು ಮಕ್ಕಳಿಗೂ ಓಮದ ಕಷಾಯ ತುಂಬಾ ಪ್ರಯೋಜನಕಾರಿ. ಮುಟ್ಟಿನ ನೋವು ಇದ್ದಾಗ ಈ ಕಷಾಯ ಸೇವನೆ ಮಾಡುವುದು ಉತ್ತಮ.
