
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು ವಿವಿಧ ಕಡೆ ಧಾರಾಕಾರವಾಗಿ ಮಳೆಯಾಗಿದೆ. ಮಳೆಗಾಲ ಆರಂಭ ವಾದ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ಹರಡುವಿಕೆಯೂ ಜೋರಾಗಿದ್ದು, ರಾಜ್ಯದಲ್ಲಿ ಇಂದು ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಚಿಕುನ್‌ಗುನ್ಯಾ ಕಾಯಿಲೆ ಹರಡುತ್ತಿದ್ದು ಜನ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ದಾಖಲಾಗುತ್ತಿದ್ದಾರೆ.
ಜಾಗೃತಿ ವಹಿಸಿ
ಗ್ರಾಮೀಣ ಪ್ರದೇಶಗಳಲ್ಲಿ ಜನರು ಕೂಡ ಈ ಬಗ್ಗೆ ಜಾಗೃತಿ ವಹಿಸಬೇಕಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಹೆಚ್ಚಾಗಿರೋ ಮನೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಧಾರವಾಡ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಒಂದೊಂದಾಗಿ ಕಂಡು ಬಂದಿದ್ದು ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ.
ಡೆಂಗ್ಯು ಪ್ರಕರಣ ಹೆಚ್ಚಳ
ಕಳೆದ 10 ದಿನಗಳಲ್ಲಿ ಸುಮಾರು 1,026 ಡೆಂಗ್ಯೂ, 137 ಚಿಕುನ್‌ಗುನ್ಯಾ ಪಾಸಿಟಿವ್ ಬಂದಿದ್ದು, ಜನರಲ್ಲಿ ಈ ಬಗ್ಗೆ ಭಯ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷ 4,414 ಡೆಂಗ್ಯೂ, 778 ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆ ಆಗಿದೆ.ಇದೀಗ ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂವಿನಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮತ್ತೊಂದೆಡೆ, ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಗರಾಜ್ ಎಂಬವರು ಮೃತಪಟ್ಟಿದ್ದರು. ಇದೂ ಸಹ ಡೆಂಗ್ಯೂವಿನಿಂದಲೇ ಎನ್ನಲಾಗಿದೆ.
ಮುನ್ನೆಚ್ಚರಿಕೆ ವಹಿಸಿ
ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು, ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚಬೇಕು, ನೀರಿನ ಶೇಖರಣೆಗಳಾದ ಸಿಮೆಂಟ್ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ ಮುಂದಾದ ಕಡೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಿದೆ. ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕರಪತ್ರ ಹಂಚಿಕೆ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಕೂಡ ಮೂಡಿಸಲಾಗುತ್ತಿದೆ
