ಚಿಕ್ಕ ಮಕ್ಕಳು ಹೇಳಿದ ಮಾತನ್ನು ಯಾವಾಗಲೂ ಕೇಳುವುದೇ ಇಲ್ಲ. ಅಮ್ಮಂದಿರು ಹೇಳುವುದನ್ನು ಕೇಳುವ ಬದಲಾಗಿ ತಾವು ಹೇಳಿದ್ದೇ ಆಗಬೇಕು ಎನ್ನುವ ಹಠ ಮಕ್ಕಳದ್ದು. ಅದು ತಿನ್ನುವ ವಿಚಾರದಲ್ಲಂತೂ ಮಕ್ಕಳು ಹಿಡಿದದ್ದೇ ಹಠ. ಹೊಡೆದರೂ ಬೈದರೂ ಮಕ್ಕಳು ಹಠ ಮಾಡುವುದನ್ನು ನಿಲ್ಲಿಸದಿದ್ದಾಗ ಮಕ್ಕಳ ಮಾತನ್ನು ಅಮ್ಮಂದಿರು ಕೇಳಲೇಬೇಕಾಗುತ್ತದೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ತಿಳಿದಿದ್ದರೂ ಕೂಡ ಅವರ ಹಠಕ್ಕೆ ಕಟ್ಟುಬಿದ್ದು ಅವರನ್ನು ಸಮಾಧಾನ ಮಾಡುವ ಭರದಲ್ಲಿ ಅವರು ಕೇಳಿದ್ದನ್ನೇ ಕೊಡಿಸುತ್ತಾರೆ. ಅದರಲ್ಲಿ ಹೆಚ್ಚಾಗಿ ಮಕ್ಕಳು ಕೇಳುವುದು ಚಾಕೋಲೇಟ್ ಮತ್ತು ಸಿಹಿ ತಿನಿಸುಗಳನ್ನ. ಆಗಿನ ಕಾಲದಿಂದಲೂ ನಾವು ತಿಳಿದುಕೊಂಡಿರುವ ಹಾಗೆ ಚಾಕೊಲೇಟ್ ಹಾಗೂ ಸಿಹಿ ತಿನಿಸು ತಿಂದರೆ ಹಲ್ಲು ಹುಳುಕಾಗುತ್ತೆ, ಒಸಡು ಹಾನಿಯಾಗುತ್ತದೆ ಎಂದುಕೊಂಡಿರುತ್ತೇವೆ. ಆದರೆ ಇವುಗಳ ಜೊತೆಗೆ ಇನ್ನೂ ಕೆಲವು ಆಹಾರಗಳು ಕೂಡ ಮಕ್ಕಳ ಹಲ್ಲು ಮತ್ತು ಒಸಡುಗಳನ್ನು ಹಾನಿಗೊಳಗಾಗಿಸುತ್ತವೆ.
ಹೌದು, ಅತಿಯಾಗಿ ತಂಪು ಮತ್ತು ಬಿಸಿ ಪದಾರ್ಥಗಳ ಸೇವನೆಯಿಂದ ಹಲ್ಲುಗಳಲ್ಲಿ ಜುಮ್ಮೆನ್ನುವ ಅನುಭವವಾಗಬಹುದು. ಇದಲ್ಲದೆ, ಮಕ್ಕಳು ದೈನಂದಿನ ಆಹಾರದೊಂದಿಗೆ ಸೇವಿಸುವ ಕೆಲವು ಆಹಾರಗಳು ಅವರ ದಂತಕ್ಷಯ, ಹಳದಿ ಹಲ್ಲು, ಹಲ್ಲು ನೋವು, ಒಸಡುಗಳು ಊದಿಕೊಳ್ಳುವುದಕ್ಕೆ ಕಾರಣವಾಗಬಹುದು. ಹೀಗಾಗಿ ಅವರ ಹಲ್ಲುಗಳ ಮತ್ತು ಒಸಡಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
ಮಕ್ಕಳ ಹಲ್ಲುಗಳ ಆರೋಗ್ಯಕ್ಕೆ ಹಾನಿಕಾರಕವಾಗುವ ವಸ್ತುಗಳ ಸೇವನೆಯಿಂದ ದೂರವಿರಿಸುವುದು ಹಾಗೂ ಅದರ ಬಗ್ಗೆ ಮಕ್ಕಳಿಗೆ ಅರ್ಥಮಾಡಿಸುವುದು ಕಷ್ಟವಾಗಬಹುದು. ಹೆಚ್ಚಿನ ಮಕ್ಕಳು ಸಾಮಾನ್ಯವಾಗಿ ಕ್ಯಾಂಡಿ ಅಥವಾ ಚಾಕೊಲೇಟ್ ತಿನ್ನಲು ಇಷ್ಟಪಡುತ್ತಾರೆ. ಹಲವು ಬಾರಿ ಪೋಷಕರು ಸಹ ಮಕ್ಕಳನ್ನು ಸುಮ್ಮನಾಗಿಸಲು ಅವರು ಕೇಳಿದೊಡನೆ ಅವುಗಳನ್ನು ನೀಡುತ್ತಾರೆ. ಇದು ಅವರ ಹಲ್ಲುಗಳಲ್ಲಿ ಹುಳು ಬರಲು ಮತ್ತು ಒಸಡುಗಳನ್ನು ಅನಾರೋಗ್ಯಕರವಾಗಿಸುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ಮಕ್ಕಳು ಇವುಗಳನ್ನು ಅತಿಯಾಗಿ ಸೇವಿಸದಂತೆ ಎಚ್ಚರವಹಿಸುವುದು ಬಹಳ ಮುಖ್ಯ.
ಸಾಮಾನ್ಯವಾಗಿ ಮಕ್ಕಳು ಹೊರಗಿನ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಆದರೆ, ಸಾಧ್ಯವಾದಷ್ಟು ಮಕ್ಕಳಿಗೆ ಪ್ಯಾಕೇಜ್ ಮಾಡಿದ, ಸಂಸ್ಕರಿಸಿದ ಆಹಾರವನ್ನು ನೀಡಬೇಡಿ. ಇಂತಹ ಆಹಾರಗಳ ಸೇವನೆಯಿಂದಾಗಿ ಹಲ್ಲುಗಳು ಹಾನಿಗೊಳಗಾಗಬಹುದು. ಪ್ಯಾಕ್ ಮಾಡಿದ ಚಿಪ್ಸ್ ಮತ್ತು ಕೇಕ್ ಸೇವನೆಯು ಮಕ್ಕಳಿಗೆ ಹಲ್ಲು ನೋವನ್ನು ಉಂಟುಮಾಡುತ್ತದೆ. ಪ್ಯಾಕ್ ಮಾಡಿದ ಚಿಪ್ಸ್ ನಲ್ಲಿಯೂ ಪಿಷ್ಟವಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ, ಚಿಪ್ಸ್ ನ ಕಣಗಳು ಹಲ್ಲುಗಳಲ್ಲಿ ಸಿಲುಕಿಕೊಳ್ಳಬಹುದು. ಆದ್ದರಿಂದ ಬ್ಯಾಕ್ಟೀರಿಯಾಗಳು ಹಲ್ಲುಗಳನ್ನು ದುರ್ಬಲಗೊಳಿಸಬಹುದು ಎಂದು ಹೇಳಲಾಗುತ್ತದೆ.
