ಧೂಮಪಾನ, ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಮೊದಲಿನಿಂದಲೂ ಎಚ್ಚರಿಸುತ್ತಾ ಬಂದರೂ ಕೂಡ ಜನ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೂ ಕೂಡ ಧೂಮಪಾನದ ದಾಸರಾಗಿ ಬಿಡುತ್ತಾರೆ. ತಾವು ಖಾಯಿಲೆಗೆ ಬೀಳುತ್ತೇವೆ ಎನ್ನುವ ಅರಿವಿದ್ದರೂ ಕೂಡ ಧೂಮಪಾನದ ಚಟದಿಂದ ದೂರ ಇರಲು ಬಯಸುವುದಿಲ್ಲ.
ಧೂಮಪಾನದಿಂದಾಗಿ ಹಲವು ಕಾಯಿಲೆಗಳು ಎದುರಾಗುತ್ತವೆ ಅವುಗಳಲ್ಲಿ ದೃಷ್ಟಿ ದೋಷವು ಕೂಡ ಒಂದು. ಸಾಮಾನ್ಯವಾಗಿ, ತಂಬಾಕು ಮತ್ತು ಇದರ ಹೊಗೆಯನ್ನು ಸೇದುವ ಮೂಲಕ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ಆದರೆ ಧೂಮಪಾನವು ನಮ್ಮ ದೃಷ್ಟಿಗೆ ಉಂಟುಮಾಡುವ ಹಾನಿಕಾರಕ ಪರಿಣಾಮದ ಬಗ್ಗೆ ನಮಗೆ ತಿಳಿದಿಲ್ಲ.
ದೃಷ್ಟಿ ಮಾಂದ್ಯತೆ, ಮ್ಯಾಕ್ಯುಲಾರ್ ಡಿಜೆನರೇಶನ್ ಅಥವಾ ಕಣ್ಣಿನ ಕೇಂದ್ರ ಭಾಗದ ಮ್ಯಾಕ್ಯುಲಾ ಎಂಬ ಅತಿ ಸೂಕ್ಷ್ಮ ಭಾಗ ಶೀಘ್ರವಾಗಿ ಸವೆಯುವುದು ಮತ್ತು ಕ್ಯಾಟರಾಕ್ಟ್ ಅಥವಾ ಕಣ್ಣಿನ ಪೊರೆ ಈ ಎರಡು ಪ್ರಮುಖ ಕಣ್ಣಿನ ಕಾಯಿಲೆಗಳಿಗೂ ಧೂಮಪಾನಕ್ಕೂ ನೇರವಾದ ಸಂಬಂಧ ಇರುವುದನ್ನು ನೇತ್ರತಜ್ಞರು ಸ್ಪಷ್ಟಪಡಿಸಿದ್ದಾರೆ.
ಧೂಮಪಾನವು ಆರೋಗ್ಯಕ್ಕೆ ಮಾರಕ, ಕ್ಯಾನ್ಸರ್ ಸೇರಿ ಹಲವು ಕಾಯಿಲೆಗಳನ್ನು ತಂದೊಡ್ಡಬಹುದು. ವಯಸ್ಕರು ಮತ್ತು ಮಕ್ಕಳೂ ಸೇರಿದಂತೆ ಪ್ರತ್ಯಕ್ಷ ಧೂಮಪಾನಿಗಳಿಗೂ ಮತ್ತು ಪರೋಕ್ಷ ಧೂಮಪಾನಿಗಳಿಗೂ ಧೂಮಪಾನದ ಹೊಗೆ ಕಣ್ಣಿಗೆ ಮತ್ತು ದೃಷ್ಟಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಧೂಮಪಾನವು ದೇಹದಲ್ಲಿ ಡಯಾಬಿಟಿಕ್ ಅಂಶವನ್ನು ಹೆಚ್ಚಿಸುವುದರ ಜೊತೆಗೆ ದೃಷ್ಟಿದೋಷನ್ನುಂಟು ಮಾಡುತ್ತದೆ. ಕಣ್ಣಿನ ನರಗಳಿಗೆ ಮಧುಮೇಹ ತೊಂದರೆ ಮಾಡುತ್ತದೆ.
ಹೆಚ್ಚೆಚ್ಚು ಧೂಮಪಾನ ಮಾಡುವುದರಿಂದ ಕಣ್ಣುಗಳು ಒಣಗಿದಂತಾಗುತ್ತದೆ, ಕಣ್ಣಿನಲ್ಲಿ ನೀರಿನ ಅಂಶವೇ ಆರಿ ಹೋಗುತ್ತದೆ. ಕಣ್ಣು ಕೆಂಪಾಗುವುದು, ತುರಿಕೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಧೂಮಪಾನದಂತಹ ಕೆಟ್ಟ ಚಟಗಳಿಂದ ದೂರ ಇರುವುದು ಆರೋಗ್ಯಕ್ಕೆ ಒಳ್ಳೆಯದು.
