
ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ 5ಭರವಸೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭವಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ದೊರಕುತ್ತಿದ್ದು, ಜನರು ಮುಗಿಬಿದ್ದು ಅರ್ಜಿ ಸಲ್ಲಿಕೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆಗೆ ಅರ್ಜಿ ಸಲ್ಲಿಸಲು ನಾಗರಿಕರು ನೂಕು ನುಗ್ಗಲಿನಲ್ಲಿ ತೆರಳುವ ಅಗತ್ಯ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗೃಹ ಜ್ಯೋತಿ ಸೌಲಭ್ಯ ಸಿಗುತ್ತೋ ಇಲ್ಲವೋ ಎಂದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ. ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ. ಅರ್ಜಿ ಸಲ್ಲಿಸಲು ನೂಕು ನುಗ್ಗಲಿನಲ್ಲಿ ತೆರಳುವ ಅವಶ್ಯಕತೆಯಿಲ್ಲ. ಮುಂದಿನ ತಿಂಗಳಿನಿಂದ ನಿಮಗೆ ವಿದ್ಯುತ್ ಬಿಲ್ ಬರುವುದಿಲ್ಲ. ಆದರೆ ನೀವು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ನಮ್ಮ ಇಂಧನ ಸಚಿವರು ತಮಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ತಪ್ಪದೇ ಅರ್ಜಿ ಸಲ್ಲಿಸಿ, ಆತಂಕ ಪಡಬೇಡಿ’ ಎಂದಿದ್ದಾರೆ.
