
ಮಂಗಳೂರು: ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಜನರು ತಪ್ಪು ಮಾಡುತ್ತಲೇ ಇದ್ದಾರೆ. ಕೊರೊನಾ ಬಂದ ಬಳಿಕ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಉದ್ಯೋಗಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿಯಲ್ಲಿರುವ ಕೆಲವರು ಇಂತಹ ವಂಚನೆಗೆ ಒಳಗಾಗುವುದು ಹೆಚ್ಚು. ಇದೀಗ ಮಂಗಳೂರಿನಲ್ಲೂ ಇಂತಹುದ್ದೇ ಒಂದು ಘಟನೆ ನಡೆದಿದ್ದು, ಕೆನಡಾದಲ್ಲಿ ಉದ್ಯೋಗ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗ ಹುಡುಕುತ್ತಿದ್ದ ವ್ಯಕ್ತಿಯೋರ್ವನಿಗೆ ತಾನು ಕೆನಡಾದ ಪ್ರಜೆ, ಇಮಿಗ್ರೇಷನ್ ಅಧಿಕಾರಿ ಎಂದು ಹೇಳಿಕೊಂಡು ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ಬಳಿಕ ವಾಟ್ಸ್ ಆಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಈತ ಉದ್ಯೋಗ ನೇಮಕಾತಿ ಬಗ್ಗೆ ವಿವಿಧ ದಾಖಲೆಗಳನ್ನು ಕಳುಹಿಸಿ ಹಂತಹಂತವಾಗಿ 4ಲಕ್ಷದ 80ಸಾವಿರ ರೂ ಗಳನ್ನು ವರ್ಗಾಯಿಸಿಕೊಂಡು ಬಳಿಕ ವಂಚನೆ ಮಾಡಿದ್ದಾನೆ. ಈ ಸಂಬಂಧ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
