
ಕೋಲ್ಕತ್ತಾ: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಈಗಾಗಲೇ ತೆರೆಕಂಡಿದ್ದು, ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿನಿಮಾದ ವಿರುದ್ಧ ಅನೇಕ ಆಕ್ರೋಶಗಳು ಕೇಳಿ ಬರುತ್ತಿದೆ. ಸಿನಿಮಾದ ಸಂಭಾಷಣೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸಿನಿಮಾ ಬ್ಯಾನ್ ಮಾಡುವಂತೆ ಕೋಲ್ಕತ್ತಾದಲ್ಲಿಯೂ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನೀಡಲಾಗಿದ್ದು, ಈ ಅರ್ಜಿಯ ವಿಚಾರಣೆಯನ್ನು ಕೋಲ್ಕತ್ತಾ ಹೈಕೋರ್ಟ್ ಜೂನ್ 27 ರಂದು ನಡೆಸಲಿದೆ.
ಆದಿಪುರುಷ್ ಸಿನಿಮಾದಲ್ಲಿ ರಾಮಾಯಣವನ್ನು ತಿರುಚಲಾಗಿರುವ ಹಿನ್ನೆಲೆ ಸಿನಿಮಾ ಬ್ಯಾನ್ ಮಾಡುವಂತೆ ಕೋರಿ ಕೋಲ್ಕತ್ತ ಹೈಕೋರ್ಟ್ ವಕೀಲ ದೇಬ್ದೀಪ್ ಮೊಂಡಲ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇದೇ ಜೂನ್ 27 ರಂದು ನಡೆಯಲಿದೆ ಎಂದು ವರದಿಯಾಗಿದೆ.
ಇನ್ನು, ಇತ್ತೀಚೆಗೆ ಸಿನಿಮಾ ಬ್ಯಾನ್‌ಮಾಡುವಂತೆ ಆಲ್‌ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್‌ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿತ್ತು. ಈ ಬಗ್ಗೆ ಪತ್ರ ಬರೆದಿರುವ ಅವರು, ಸಿನಿಮಾದಲ್ಲಿ ವಿವಾದ ಹುಟ್ಟು ಹಾಕುವಂಥ ಸಾಕಷ್ಟು ಸನ್ನಿವೇಶಗಳಿವೆ. ಕಥೆಯನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಡಲಾಗಿದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವನ್ನುಂಟು ಮಾಡಿದೆ. ಈ ಹಿನ್ನೆಲೆ ಸಿನಿಮಾವನ್ನು ಥಿಯೇಟರ್‌ಹಾಗೂ ಒಟಿಟಿ ಎರಡಲ್ಲೂ ಪ್ರಸಾರ ಮಾಡದಂತೆ ಬ್ಯಾನ್‌ಮಾಡಬೇಕು ಎಂದಿದ್ದಾರೆ.
