
ಬಂಟ್ವಾಳ: ತಾಲೂಕಿನ ಕಾಮಾಜೆ ಕ್ರಾಸ್ ಬಳಿ ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಮೃತರನ್ನು ವಾಮದಪದವು ಸಮೀಪದ ಪಾಂಗಲ್ಪಾಡಿ ನಿವಾಸಿ ಶ್ರೀನಿವಾಸ ಉಡುಪ(58) ಎಂದು ಗುರುತಿಸಲಾಗಿದೆ.
ಶ್ರೀನಿವಾಸ ಉಡುಪ ವಾಮದಪದವಿನಿಂದ ಬಿಸಿ ರೋಡಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ತಕ್ಷಣವೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು, ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೆಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
