Home ಕರ್ನಾಟಕ ನೀರು ಬಿಟ್ಟರೇನು, ಬರ ಬಂದರೇನು? ಗ್ಯಾರಂಟಿಗಳು ಇದ್ದೇ ಇವೆಯಲ್ಲ!

ನೀರು ಬಿಟ್ಟರೇನು, ಬರ ಬಂದರೇನು? ಗ್ಯಾರಂಟಿಗಳು ಇದ್ದೇ ಇವೆಯಲ್ಲ!

0
ನೀರು ಬಿಟ್ಟರೇನು, ಬರ ಬಂದರೇನು? ಗ್ಯಾರಂಟಿಗಳು ಇದ್ದೇ ಇವೆಯಲ್ಲ!

ಮುಂಗಾರು ಮಳೆ ಕೈಕೊಟ್ಟಿದೆ, ಕೆಲವೆಡೆ ಕಾಲೂ ಕೊಟ್ಟಿದೆ. ಸಹಜವಾಗೇ ಬರದ ಪರಿಸ್ಥಿತಿ ಆವರಿಸಿದೆ. ಆದ್ದರಿಂದ ಇದರಲ್ಲಿ ವಿಶೇಷ ಅಂತ ಏನೂ ಇಲ್ಲ! ಸಾಮಾನ್ಯವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭಗಳಲ್ಲಿ ಅನಾವೃಷ್ಟಿ, ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅತಿವೃಷ್ಟಿ ಎಂಬ ರೂಢಿಯ ಮಾತೊಂದು ಸಾರ್ವಜನಿಕ ವಲಯದಲ್ಲಿದೆ. ಇದು ಎಷ್ಟೋ ಸಂದರ್ಭಗಳಲ್ಲಿ ಸತ್ಯ ಎನಿಸಿದ್ದೂ ಇದೆ! ಆದ್ದರಿಂದ ಈ ಸಲ ಅನಾವೃಷ್ಟಿ ಅಂತ ಮೊದಲೇ ಮುನ್ಸೂಚನೆ ಇತ್ತು. ಆದರೆ ಜನರಿಗೆ ಅದು ಅಷ್ಟಾಗಿ ಗೊತ್ತಾಗಿರಲಿಲ್ಲ. ಅರ್ಥವೂ ಆಗಿರಲಿಲ್ಲ, ಅರಿವೂ ಆಗಿರಲಿಲ್ಲ! ಆದರೆ ರಾಜ್ಯ ಕಾಂಗ್ರೆಸ್ಸಿಗೆ ಮಾತ್ರ ಗೊತ್ತಿತ್ತೋ ಏನೋ ಎಂಬ ಸಾತ್ವಿಕ ಸಂದೇಹ ನನ್ನಲ್ಲಿ ಹುಟ್ಟಿಕೊಂಡಿದೆ.

ಈ ವರ್ಷ ಬರ ಬರುವುದು ಗ್ಯಾರಂಟಿ. ಆದ್ದರಿಂದ ಐದು ಗ್ಯಾರಂಟಿಗಳನ್ನು ಜನತೆಗೆ ಮೊದಲೇ ನಾವು ಘೋಷಿಸಿ ಬಿಡೋಣ ಎಂದು ನಿರ್ಧರಿಸಿದ್ದರ ಫಲವಾಗಿ ರಾಜ್ಯದ ಜನತೆ ಬರದ ಛಾಯೆಯಲ್ಲೂ ಆ ಗ್ಯಾರಂಟಿಗಳನ್ನು ಪಡೆದು ನಿತ್ಯದ ಬದುಕಿನಲ್ಲಿ ಸಂಭವನೀಯ ತೊಂದರೆಗಳಿಂದ ಸ್ವಲ್ಪಮಟ್ಟಿಗಾದರೂ ಪಾರಾಗಿದ್ದಾರೆ ಅಂದುಕೊಳ್ಳಬಹುದು. ಆದ್ದರಿಂದ ವಿಶೇಷ ಇರುವುದು, ಕಾವೇರಿಯ ನೀರು ಬಿಟ್ಟರೂ, ರಾಜ್ಯದ ಬಹುಪಾಲು ತಾಲೂಕುಗಳಲ್ಲಿ ಬರ ಬಂದರೂ, ಐದು ವರ್ಷಗಳವರೆಗೆ ರಾಜ್ಯದ ಜನಸಾಮಾನ್ಯರನ್ನು ಪಂಚ ಗ್ಯಾರಂಟಿಗಳ ಮೂಲಕ ಸರ್ಕಾರ ಕಾಪಾಡುತ್ತದೆ. ಸದ್ಯ ಕಾಪಾಡುತ್ತಿದೆ ಎಂಬ ಧೈರ್ಯವನ್ನು ಜನರ ನಿತ್ಯದ ಬದುಕಿನಲ್ಲಿ ಸರ್ಕಾರ ತುಂಬಿಸಿರುವುದರಲ್ಲಿ!

ಹಾಗಂತ ಬೆಲೆ ಏರಿಕೆಗೂ, ಅಭಿವೃದ್ಧಿ ಕಾರ್ಯಗಳಿಗೂ, ಜನಸಾಮಾನ್ಯರಿಗೂ ಯಾವುದೋ ಸಂಬಂಧ ಇರಬೇಕು ಅಂತ ಅಂದುಕೊಳ್ಳುವುದೇ ಶುದ್ಧ ತಪ್ಪು. ರಾಜ್ಯದ ಆರ್ಥಿಕತೆ ಕುಸಿಯುವುದಕ್ಕೂ, ಜನಸಾಮಾನ್ಯರಿಗೆ ಕೊಡುವ ಗ್ಯಾರಂಟಿಗಳಿಗೂ, ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ವಿಳಂಬವಾಗುವುದಕ್ಕೂ, ಇನ್ನಿತರ ಯಾವುದೇ ಸಮಸ್ಯೆಗಳಿಗೂ ಸಂಬಂಧವನ್ನು ಕಲ್ಪಿಸುವುದು ಹಾಸ್ಯಾಸ್ಪದವಾಗುತ್ತದೆ. ರಾಜ್ಯದ ಬೊಕ್ಕಸ ಗ್ಯಾರಂಟಿಗಳ ಅನುಷ್ಠಾನಕ್ಕೇ ಬರಿದಾದರೂ ಗ್ಯಾರಂಟಿಗಳನ್ನು ಸರ್ಕಾರ ಕೊಟ್ಟೇ ಕೊಡುವುದರಿಂದ ಜನಸಾಮಾನ್ಯರ ನಿತ್ಯ ಜೀವನ ಸಾಗುತ್ತದೆ. ಖಾಸಗಿ ಬಸ್ಸು, ಕಾರು, ಅಟೋ ಇನ್ನಿತರ ಯಾವುದೇ ಖಾಸಗಿ ವ್ಯವಹಾರಗಳ ಮೇಲೆ ಈ ಗ್ಯಾರಂಟಿಗಳ ಅನುಷ್ಠಾನದಿಂದ ಯಾವುದೇ ಸಮಸ್ಯೆಯಾದರೂ, ಜನಸಾಮಾನ್ಯರಿಗೂ ಅದಕ್ಕೂ ಸಂಬಂಧ ಖಂಡಿತವಾಗಿಯೂ ಇಲ್ಲ. ಇರುವುದಕ್ಕೆ ಸಾಧ್ಯವೂ ಇಲ್ಲ!

ಯಾಕೆಂದರೆ, ನೋಡಿ: ಈಗ ಸರ್ವೇ ಸಾಮಾನ್ಯವಾಗಿ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ವಿದ್ಯುತ್ ಯೂನಿಟ್ ರೇಟು ಜಾಸ್ತಿಯಾಗಿದೆ. ಕುಡಿಯುವ ಎಣ್ಣೆಯ ರೇಟೂ, ಸಾದಾ ಎಣ್ಣೆಯ ರೇಟೂ ಏರಿಕೆಯಾಗಿದೆ. ಇದರಿಂದ ಅಂಥ ಪರಿಣಾಮ ಏನೂ ಆಗುವುದಿಲ್ಲ. ಯಾಕೆಂದರೆ, ಅಕ್ಟೋಬರಿಂದ ರಾಜ್ಯ ಸರ್ಕಾರವು 10ಕೆಜಿ ಅಕ್ಕಿ ನೀಡಲು ವ್ಯವಸ್ಥೆ ಮಾಡಿಕೊಂಡಿದೆ. ಸದ್ಯ ಗೃಹಜ್ಯೋತಿಯ ಬರೋಬ್ಬರಿ 200 ಯೂನಿಟ್ ವಿದ್ಯುತ್ ಉಚಿತ, ಮನೆಯೊಡತಿಗೆ ತಿಂಗಳಿಗೆ ಗೃಹಲಕ್ಷ್ಮಿಯ 2,000 ಸಾವಿರ, ಗಂಡನ ಮನೆಗೆ, ಮಾವನ ಮನೆಗೆ, ಸೊಸೆ ಮನೆಗೆ, ದೇವಸ್ಥಾನಕ್ಕೆ, ಹಾಸ್ಪಿಟಲ್ಲಿಗೆ, ಹಾಸನಕ್ಕೆ, ಬೆಂಗಳೂರಿಗೆ ಹೋಗುವ ಹೆಂಗಸರಿಗೆ ಕೆ.ಎಸ್.ಆರ್.ಟಿ.ಸಿ, ಬಿ.ಎಮ್.ಟಿ.ಸಿ. ಬಸ್ಸುಗಳಲ್ಲಿ ಪ್ರಯಾಣ ಉಚಿತ (ಗಂಡಸರು ಹೋಗಬಾರದೆಂದಲ್ಲ, ಹೋಗಬಹುದು. ಆದರೆ ಹೆಂಗಸರನ್ನು ಕಳಿಸಿದರೆ ಒಳ್ಳೆಯದು. ಯಾಕೆಂದರೆ ಅವರಿಗೆ ಟಿಕೆಟ್ ಫ್ರೀ), ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ, ಡಿಪ್ಲೊಮಾ ಪಾಸು ಮಾಡಿದವರಿಗೆ 1,500 ಸಾವಿರ ರೂ, ಹೀಗೆ, ಒಟ್ಟು ಐದು ವರ್ಷದ ಅವಧಿಯಲ್ಲಿ ನಾಲ್ಕರಿಂದ ಐದು ಲಕ್ಷ ಆಗುವಷ್ಟು ಹಣವನ್ನು ಪ್ರತಿ ಕುಟುಂಬಕ್ಕೂ ಸರ್ಕಾರ ನೀಡುತ್ತದೆ ಎಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಇಬ್ಬರೂ ಸಹಿಮಾಡಿರುವ ಗ್ಯಾರಂಟಿ ಕಾರ್ಡುಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಆದ್ದರಿಂದ ಯಾವ ಬರದ ಸಮಸ್ಯೆಯೂ, ನೀರಿನ ಕೊರತೆಯ ಪರಿಣಾಮವೂ, ಬೆಲೆಯೇರಿಕೆಯ ಪ್ರಭಾವವೂ ಜನಸಾಮಾನ್ಯರಿಗೆ ಆಗಲಾರದು, ಆಗಬಾರದು.

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಜೊತೆಗೆ ಬರವೂ ಬರಬಹುದು. ಆಗ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಮೊದಲೇ ಐದು ಗ್ಯಾರಂಟಿಗಳನ್ನು ಘೋಷಿಸಿ, ಸಂಭವನೀಯ ಪ್ರತಿಕೂಲ ಪರಿಸ್ಥಿತಿಯನ್ನು ಜೂನ್ ಒಂದರಿಂದಲೇ ಈ ಕಾಂಗ್ರೆಸ್ಸು ಸರ್ಕಾರ ಸಮರ್ಥವಾಗಿ ನಿರ್ವಹಿಸುತ್ತಿದೆ. ಇಂಥದ್ದರಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ವಿಚಾರ ಮುಖ್ಯವಾಗಬಾರದು. ಅವರೂ ನಮ್ಮ ಬ್ರದರ್ಸು. ಅಲ್ಲಿಯೂ ರೈತರಿದ್ದಾರೆ. ಅವರಿಗೂ ಕುಡಿಯಲು, ಬೆಳೆ ಬೆಳೆಯಲು ನೀರು ಬೇಕು. ಇದ್ದುದರಲ್ಲೇ ಅವರಿಗೂ ನೀರು ಬಿಟ್ಟರೆ ಏನು ಪ್ರಾಬ್ಲಮ್? ಹಂಚಿಕೊಂಡು ಬಾಳಬೇಕು ಅಂತ ದೊಡ್ಡವರು ಹೇಳಿದ ಆದರ್ಶವಿಲ್ಲವೆ‌, ಕಾಣುವುದಿಲ್ಲವೆ ಸರ್ಕಾರದ ಈ ಔದಾರ್ಯದ ನಡೆಯಲ್ಲಿ? ನೀರು ಬಿಟ್ಟು ನಮ್ಮ ಸರ್ಕಾರ ತೋರಿದ ದೊಡ್ಡತನವನ್ನು ರಾಜ್ಯದ ಜನತೆ, ವಿಪಕ್ಷಗಳು, ರೈತ ಸಂಘಗಳು ಪೂರ್ವಗ್ರಹವಿಲ್ಲದೆ ಗ್ರಹಿಸಬೇಕಿದೆ. ಅದನ್ನು ಬಿಟ್ಟು ಸುಮ್ಮನೆ ಬಂದ್ ಗಳನ್ನು ಆಚರಿಸಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಎಷ್ಟರಮಟ್ಟಿಗೆ ಸರಿ?.

ಜನಸಾಮಾನ್ಯರನ್ನು ಗುರಿಯಾಗಿಸಿಕೊಂಡು ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಂಥದ್ದರಲ್ಲಿ ಈ ಪರಿಯ ರಾಜಕೀಯ ಸಲ್ಲದು! ಒಂದು ದಿನ ಬಂದ್ ಆಚರಿಸಿದರೆ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತದೆ ಎಂಬುದರ ಪ್ರಜ್ಞೆ ಈ ಬಂದ್ ಕರೆ ಕೊಡುವವರಿಗೆ ಗೊತ್ತಿರಬೇಕು. ಆ ನಷ್ಟವನ್ನು ಹೇಗೆ ಸರ್ಕಾರ ಭರಿಸುತ್ತದೆ? ಸರ್ಕಾರವೇನೂ ದುಡಿಯತ್ತಾ?. ಇಲ್ಲ, ಹಾಗಾದರೆ ಮತ್ತೇನು? ಮತ್ತೆ ಅನಿವಾರ್ಯವಾಗಿ ಬೆಲೆಯೇರಿಕೆ ಮಾಡುವುದೊಂದೇ ಸರ್ಕಾರದ ಮುಂದಿರುವ ದಾರಿಯಾಗಿರುತ್ತದೆ. ಇದಕ್ಕೆಲ್ಲ ಅವಕಾಶವನ್ನು ಬಂದ್ ಆಚರಿಸುವುದರ ಮೂಲಕ ಕೊಡಬಾರದು. ಇದು ದ್ವೇಷ ರಾಜಕಾರಣಕ್ಕೂ ನಾಂದಿ ಹಾಡುತ್ತದೆ. ಮೇಲಾಗಿ, ರೈತರ ಹಿತವನ್ನು ಕಾಪಾಡುವ ತನ್ನ ಜವಾಬ್ದಾರಿಯನ್ನು ಸರ್ಕಾರ ಎಲ್ಲಿ ಮರೆತಿದೆ ಎಂಬುದೇ ಗೊತ್ತಾಗುತ್ತಿಲ್ಲ? ಪ್ರಾಧಿಕಾರದಿಂದ ತೀರ್ಪು ಬರುವ ಮೊದಲೇ ತಮಿಳುನಾಡಿಗೆ ನೀರು ಬಿಟ್ಟು ತನ್ನ ಜವಾಬ್ದಾರಿಯನ್ನು ಯಾವುದೇ ಅಂಜಿಕೆಯಿಲ್ಲದೇ ನಿರ್ವಹಿಸಿದೆ ಎಂಬುದನ್ನು ಜನಸಾಮಾನ್ಯರು ಮೊದಲು ಅರ್ಥಮಾಡಿಕೊಳ್ಳಬೇಕಿದೆ.

ಇದು ಮಾನವಜಾತಿ ಜಾತಿ ತಾನೊಂದೇ ವಲಂ ಎಂಬ ಪಂಪನ ನಿಲುವನ್ನು ಎತ್ತಿಹಿಡಿದಿದೆ. ಅಲ್ಲಿರುವವರೂ ಮನುಷ್ಯರೇ ತಾನೆ? ಅವರಿಗೂ ನೀರು ಬೇಕು ತಾನೆ? ಜನರಿಗೆ ಇದು ಅರ್ಥವಾಗದ ವಿಚಾರವೇ? ನಮ್ಮಲ್ಲಿ ನೀರು ಇಲ್ಲವಾದಾಗ ಅವರು ಕೊಡುವುದಿಲ್ಲ ಎಂದಿದ್ದಾರೆಯೇ? ಕೊಡದಿದ್ದರೆ, ಆಗ ಸರ್ಕಾರವೇ ಮುಂದೆ ನಿಂತು ನೀರು ತಂದು ಜನತೆಗೆ ಒದಗಿಸುತ್ತದೆ ಎಂಬ ವಿಶ್ವಾಸ, ಭರವಸೆ, ನಂಬಿಕೆ ಜನತೆಯಲ್ಲಿರಬೇಕು. ನಂಬಿಕೆ ಮುಖ್ಯ, ನಂಬಿ ಕೆಟ್ಟವರಿಲ್ಲ ಎಂದು ದೊಡ್ಡವರು ಹೇಳಿದ್ದು ಗೊತ್ತಿದ್ದೂ ಗೊತ್ತಿದ್ದೂ ಜನಸಾಮಾನ್ಯರು ಸರ್ಕಾರವನ್ನು ಪೇಚಿಗೆ ಸಿಲುಕಿಸಬಾರದು.

ಇಂಥ ವಿಚಾರಗಳನ್ನು ಇಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವೇ ಪ್ರಜಾತಂತ್ರಕ್ಕೆ ವಿರುದ್ಧವಾದುದು. ಅಷ್ಟಕ್ಕೂ ಕಾಂಗ್ರೆಸ್ಸೇ ಈ ರಾಜ್ಯವನ್ನು ಬಹುವರ್ಷ ಆಳಿವೆ. ಕಾವೇರಿ, ಮಹದಾಯಿ, ಕೃಷ್ಣೆಯ ನದಿ ವಿಚಾರದಲ್ಲಿ ಏನು ಮಾಡಬೇಕೆಂಬುದು ಅವರಿಗೆ ಗೊತ್ತಿಲ್ಲವೇ? ಗೊತ್ತೇ ಇದೆ. ಆದ್ದರಿಂದಲೇ ಅವರು ಈ ವಿಚಾರವನ್ನು ಬಗೆಹರಿಸುವ ಪ್ರಯತ್ನವನ್ನು ಲಾಗಾಯ್ತಿನಿಂದಲೂ ಬಹು ಪ್ರಾಮಾಣಿಕಾವಾಗಿ ಮಾಡುತ್ತಲೇ ಬಂದಿದ್ದಾರೆ. ರಾಜ್ಯದ ಜನತೆಗೆ ಇದೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಪ್ರತಿಭಟನೆ, ಬಂದ್ ಆಚರಿಸಿ ಸರ್ಕಾರಕ್ಕೆ ನಷ್ಟವನ್ನು ಮಾಡಿದ್ದು ಅಕ್ಷಮ್ಯ! ಇದು ಜನಸಾಮಾನ್ಯರಿಗೆ ಅರ್ಥವಾಗಬೇಕು. ನೆಲ, ಭಾಷೆ, ನದಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಇಂಥ ಪ್ರತಿಭಟನೆಗಳನ್ನು ಮಾಡಿದರೆ ಸರ್ಕಾರದ ಆಡಳಿತದ ಯಂತ್ರ ಚಾಲನೆಗೆ ಅಡ್ಡಿಪಡಿಸದಂತಾಗುತ್ತದೆ.

ಆಡಳಿತದ ಯಂತ್ರ ನಿಂತುಹೋದರೆ ಯಾರು ಜವಾಬ್ದಾರಿಯಾಗುತ್ತಾರೆ? ಮುಖ್ಯಮಂತ್ರಿಗಳು ಜನತೆಗೆ ಆಶ್ವಾಸನೆ ರೂಪದ ಗ್ಯಾರಂಟಿಗಳನ್ನು ಸಮರ್ಥವಾಗಿ ಜಾರಿಗೊಳಿಸಲು ಹಗಲಿರುಳು ಹರಸಾಹಸ ಪಡುತ್ತಿರುವುದು, ತನ್ನ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದಿರುವುದು, ಪಂಚಾಯ್ತಿಗೊಂದು ಮದ್ಯದ ಅಂಗಡಿ ತೆರೆಯುವ ನಿಲುವನ್ನು ವ್ಯಕ್ತಪಡಿಸಿದ್ದು ಒಂದು ಕಡೆಯಾದರೆ, ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಕೈಂಕರ್ಯದಲ್ಲಿ ಉಪ ಮುಖ್ಯಮಂತ್ರಿಗಳು ಯಾವ ಯಾವ ಪಕ್ಷದಲ್ಲಿ ಅತೃಪ್ತರು, ಅಸಮಾಧಾನಿತರು, ಬಂಡಾಯಗಾರರು ಇರುವರೋ ಅಂಥವರನ್ನು ಕರೆದು ಪಕ್ಷದ ಶಾಲು ಹೊದಿಸಿ ಸೇರಿಸಿಕೊಳ್ಳುವ ಭಗೀರಥ ಪ್ರಯತ್ನ ಮಾಡುತ್ತಿರುವುದು ಇನ್ನೊಂದು ಕಡೆ. ರಾಜ್ಯದ ಹಿತಗಳನ್ನು ಕಾಯುವ ಇಂಥ ಕಾರ್ಯಗಳನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು. ಒಂದೆಡೆ, ಅಲ್ಪಸಂಖ್ಯಾತರ ಸರ್ವಾಂಗೀಣ ಹಿತವನ್ನು ಕಾಯುತ್ತಿರುವ ಸರ್ಕಾರವೇನು ಕೈಕಟ್ಟಿ ಸುಮ್ಮನೆ ಕೂರಲಿಲ್ಲ ಎಂಬ ಎಚ್ಚರದ ಪ್ರಜ್ಞೆಯಾದರೂ ಜನಸಾಮಾನ್ಯರಿಗೆ ಇರಬೇಕು. ಸರ್ಕಾರದ ವಿರುದ್ಧ ಸುಖಾಸುಮ್ಮನೆ ವಿನಾಕಾರಣ ಬಡಕಾಯಿಸಬಾರದು.

                                                           – ಟಿ.ದೇವಿದಾಸ್

ಲೇಖಕರು ಏಳು ಕೋಟಿ ಜನಸಾಮಾನ್ಯ ಕನ್ನಡಿಗರಲ್ಲಿ ಒಬ್ಬರು.

ಸರ್ಕಾರಿ ಭಾಗ್ಯಗಳ ಅತ್ಯಂತ ಕಡಿಮೆ ಫಲಾನುಭವಿ.

 

LEAVE A REPLY

Please enter your comment!
Please enter your name here