ಉಳ್ಳಾಲ: ಮೀನಿನ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಕೋಟೆಕಾರ್ ನಿವಾಸಿ ಹನೀಫ್ ಎನ್ನುವವರ ಪುತ್ರ ಅಝ್‌ವೀನ್(21) ಮೃತ ದುರ್ದೈವಿ. ತೊಕ್ಕೊಟ್ಟುವಿನಿಂದ ಮಂಗಳೂರಿನ ಕಡೆಗೆ ಮೀನುಗಾರಿಕಾ ಕೆಲಸಕ್ಕೆಂದು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸಮೀಪ ಮೀನು ಸಾಗಾಟದ ವಾಹನವೊಂದರ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ಹಿನ್ನೆಲೆ ಲಾರಿ ಹಿಂಭಾಗದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಸವಾರನಿಗೆ ದಿಕ್ಕು ತಪ್ಪಿದಂತಾಗಿ ನಿಯಂತ್ರಣ ತಪ್ಪಿ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಇನ್ನು, ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅಝ್‌ವೀನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
