
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಆಗಾಗ ಧರ್ಮ ದಂಗಲ್ ನಡೆಯುತ್ತಲೇ ಇರುತ್ತವೆ. ಕಳೆದ ಬಾರಿ ಕೂಡ ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟಾಗಿ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗಿರಲಿಲ್ಲ. ಕ್ರಮೇಣ ಎಲ್ಲಾ ವಿಚಾರವು ತಣ್ಣಗಾಗಿತ್ತು, ಆದರೆ ಇದೀಗ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಧರ್ಮ ದಂಗಲ್ ತಲೆ ಎತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಹಬ್ಬ ಹರಿದಿನಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಹಿಂದೂ ಸಂಘಟನೆ ಒತ್ತಾಯಿಸಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ ದತ್ತನಗರ ಮಾತನಾಡಿ, ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ಕೇಸರಿ ಧ್ವಜಗಳನ್ನು ಹಾಕಲಾಗಿರುವ ಹಿಂದೂ ವ್ಯಾಪಾರಿಗಳ ಅಂಗಡಿಗಳಿಗೆ ಮಾತ್ರ ಭಕ್ತರು ಭೇಟಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಹಿಂದೂಯೇತರರಿಗೂ ಮಳಿಗೆಗಳನ್ನು ಹಾಕಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದೇವಸ್ಥಾನದ ಎಲ್ಲಾ ಹಿಂದೂ ವ್ಯಾಪಾರಿಗಳ ಅಂಗಡಿಗಳ ಮುಂದೆ ಕೇಸರಿ ಧ್ವಜವನ್ನು ಹಾಕಿದ್ದಾರೆ.
