ಕುಂದಾಪುರ: ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಏಳನೇ ತರಗತಿ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ನಡೆದಿದೆ.
ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಶಾಲೆಯ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪೃಥ್ವಿರಾಜ್ ಶೆಟ್ಟಿ(12) ಮೃತ ವಿದ್ಯಾರ್ಥಿ.
ಶುಕ್ರವಾರ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಪೃಥ್ವಿರಾಜ್ ಶನಿವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೊರಟು ಶಾಲಾ ವಾಹನಕ್ಕೆ ಕಾಯುತ್ತಾ ನಿಂತಿದ್ದ ವೇಳೆ ಆತನಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ತಾಯಿಯ ಬಳಿ ಎದೆ ನೋವಿನ ಬಗ್ಗೆ ಪೃಥ್ವಿರಾಜ್ ಹೇಳಿಕೊಂಡಿದ್ದು, ಅದಾಗಲೇ ಬಾಲಕ ಕುಸಿದು ಬಿದ್ದಿದ್ದು, ತಕ್ಷಣವೇ ಆತನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲಿಯೇ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಹೃದಯಾಘಾತದಿಂದ ಬಾಲಕ ಮೃತಪಟ್ಟಿರಬಹುದು ಎಂದು ವೈದ್ಯರು ಊಹಿಸಿದ್ದಾರೆ
ಇನ್ನು, ಕಳೆದ ವರ್ಷ ಇದೇ ಸಮಯದಲ್ಲಿ ಆತನ ಅಕ್ಕ ಕೂಡ ಮನೆಯಲ್ಲಿ ಓದುತ್ತಿದ್ದ ವೇಳೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಒಂದು ವರ್ಷದೊಳಗೆ ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
