
ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ದಕ್ಷಿಣ ಕನ್ನಡ ಮಂಗಳೂರು ವತಿಯಿಂದ ಉಡುಪಿಯ ಅಜ್ಜರಕಾಡು ಮೈದಾನ ಮತ್ತು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಅಕ್ಟೋಬರ್ 28 ಮತ್ತು 29 ರಂದು ವಿಶ್ವ ಬಂಟರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ಟೋಬರ್ 28 ರಂದು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಅಕ್ಟೋಬರ್ 29 ರಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಳೂರು ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ವಿಶ್ವಬಂಟರ ಸಮ್ಮೇಳನದಲ್ಲಿ ಬಾಲಿವುಡ್ ತಾರೆಯರಾದ ಐಶ್ವರ್ಯಾ ರೈ, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಪೂಜಾ ಹೆಗ್ಡೆ ಹಾಗೂ ʼಕಾಂತಾರʼ ನಾಯಕ ರಿಷಬ್ ಶೆಟ್ಟಿ, ಗುರುಕಿರಣ್, ಶ್ರೀನಿಧಿ ಶೆಟ್ಟಿ, ಅನುಷ್ಕಾ ಶೆಟ್ಟಿ, ರಾಜ್ ಶೆಟ್ಟಿ, ರೂಪೇಶ್ ಶೆಟ್ಟಿ, ಯಶ್ ಸಹಿತ ಹಲವು ತಾರೆಯರ ದಂಡು ಮೇಳೈಸಲಿದೆ. ಅಲ್ಲದೇ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಂಬಯಿ ಸಂಸದ ಗೋಪಾಲ ಶೆಟ್ಟಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮೊದಲಾದವರು ಭಾಗವಹಿಸಲಿದ್ದಾರೆ.
ಇನ್ನು, ಅಕ್ಟೋಬರ್ 28ರಂದು ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳನ್ನು ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಮೈದಾನದವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಹುಲಿವೇಷ, ಚೆಂಡೆ ವಾದನ, ಸ್ತಬ್ಧಚಿತ್ರಗಳು, ಕಂಬಳದ ಕೋಣಗಳು, ವಿವಿಧ ಬಗೆಯ ವೇಷಗಳು ಮೆರವಣಿಗೆಯುದ್ದಕ್ಕೂ ಸಾಗಿ ಬರಲಿದೆ.
