
ಬಂಟ್ವಾಳ: ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ವೇಳೆ ಬ್ಯಾನರ್ ವಿಚಾರಕ್ಕೆ ಎರಡು ತಂಡಗಳ ನಡುವೆ ನಡೆದ ಗಲಾಟೆ ಇದೀಗ ಚೂರಿ ಇರಿತದವರೆಗೂ ಹೋಗಿದ್ದು, ಗುರುವಾರ ರಾತ್ರಿ ಮೂವರ ಮೇಲೆ ಮತ್ತೊಂದು ತಂಡದ ಸದಸ್ಯರು ಚೂರಿ ಇರಿದಿರುವ ಘಟನೆ ಮೆಲ್ಕಾರಿನಲ್ಲಿ ನಡೆದಿದೆ. ಚೂರಿ ಇರಿತದಿಂದಾಗಿ ಮೂವರು ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೂರಿ ಇರಿತಕ್ಕೊಳಗಾದವರನ್ನು ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್ ಮತ್ತು ಶಂಕರ್ ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಮೆಲ್ಕಾರ್ ಜಂಕ್ಷನ್‌ನಲ್ಲಿ ಒಂದು ತಂಡದ ಸದಸ್ಯರು ಬ್ಯಾನರ್ ತೆರವು ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಧಾವಿಸಿ ಬಂದ ಇನ್ನೊಂದು ತಂಡ ಹಲ್ಲೆ ನಡೆಸಿ, ಚೂರಿ ಇರಿದು ಪರಾರಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮೂವರು ಗಾಯಾಳುಗಳನ್ನು ಆರಂಭದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನಿಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಮೂವರನ್ನೂ ಕೂಡ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
