
ಮಂಗಳೂರು: ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದ್ದು, ರಾಹುಗ್ರಸ್ತ ಚಂದ್ರ ಗ್ರಹಣ ಎಂದು ಕರೆಯಲ್ಪಡುವ ಈ ಗ್ರಹಣವು ಅಶ್ವಿನಿ ನಕ್ಷತ್ರದ ನಾಲ್ಕನೇ ಪಾದದಲ್ಲಿ ಗೋಚರಿಸುತ್ತದೆ. ಗ್ರಹಣ ಮಧ್ಯರಾತ್ರಿ 1:5 ಗಂಟೆಗೆ ಆರಂಭವಾಗಿ 2:24ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.
ಪಿಲಿಕುಳದಲ್ಲಿ ಸಂಜೆ 7:30ರಿಂದ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೂರದರ್ಶಕದ ಮೂಲಕ ಗುರು, ಶುಕ್ರ, ಶನಿ ಗ್ರಹ ಮತ್ತು ಚಂದ್ರನನ್ನು ನೋಡಬಹುದಾಗಿದೆ. ಈ ವೇಳೆ ಸಿಬ್ಬಂದಿಗಳಿಂದ ಗ್ರಹಣಗಳ ಬಗ್ಗೆ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಆಸಕ್ತರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದವರು ಮನೆಯಲ್ಲಿಯೂ ಕೂಡ ಬರಿಗಣ್ಣಿನಿಂದ ಗ್ರಹಣವನ್ನು ವೀಕ್ಷಿಸಬಹುದು ಎಂದು ಹೇಳಲಾಗಿದೆ.
ಇನ್ನು, ಗ್ರಹಣ ಹಿನ್ನೆಲೆ ಹಲವು ದೇವಾಲಯಗಳಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆಯಾಗಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ರಾತ್ರಿಯ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯ ವಾಗಲಿದ್ದು ಬಳಿಕ ದೇವರ ದರ್ಶನ ಇರುವುದಿಲ್ಲ, ರಾತ್ರಿಯ ಭೋಜನ ಇರುವುದಿಲ್ಲ. ಸಾಯಂಕಾಲ ಆಶ್ಲೇಷ ಬಲಿ ಸೇವೆಯೂ ಇರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
