
ಬೆಂಗಳೂರು: ಅಕ್ಟೋಬರ್ 29, 2021 ಕನ್ನಡ ಚಿತ್ರರಂಗಕ್ಕೆ, ಕನ್ನಡಿಗರಿಗೆ ಬಹುದೊಡ್ಡ ಆಘಾತವೊಂದು ಬರಸಿಡಿಲಿನಂತೆ ಬಂದು ಬಡಿದಿತ್ತು. ನಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ತೆರಳಿದ್ದರು.ಕನ್ನಡ ಮಾತ್ರ ಅಲ್ಲ ಬೇರೆ ಬೇರೆ ಭಾಷೆಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಪುನೀತ್ ರಾಜ್ಕುಮಾರ್ ಅಗಲುವಿಕೆಯ ಸತ್ಯವನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗಲಿಲ್ಲ. ಇದೀಗ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಎರಡು ವರ್ಷ ಕಳೆದಿದೆ.
ಪುನೀತ್ ರಾಜ್ಕುಮಾರ್ ಅಗಲುವಿಕೆಯ ನೋವು ಕುಟುಂಬಸ್ಥರಲ್ಲಿ ಇನ್ನೂ ಮಾಸಿಲ್ಲ. ಇಂದು ಪುನೀತ್ ರಾಜ್ಕುಮಾರ್ 2ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಕುಟುಂಬಸ್ಥರು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೇ ಇಡೀ ದಿನ ಕುಟುಂಬಸ್ಥರು ಅನ್ನದಾನ ಕೂಡ ಮಾಡುತ್ತಿದ್ದಾರೆ. ಪುಣ್ಯಸ್ಮರಣೆ ಕಾರ್ಯಕ್ರಮಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. 2ನೇ ವರ್ಷದ ಪುಣ್ಯಸ್ಮರಣೆಗೆ ರಾಜ್ ಕುಟುಂಬಸ್ಥರಿಂದ ಅಪ್ಪು ಸಮಾಧಿ ನಿರ್ಮಾಣ ಮಾಡಲಾಗಿದೆ.
ಇನ್ನು, ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಜನ ಸಾಗರವೇ ಹರಿದು ಬರುತ್ತಿದ್ದು, ಇಂದು ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ ನಡೆಯಲಿದೆ.
