
ಬೆಂಗಳೂರು: ಕೊರೊನಾ ವೈರಸ್ ಕಾಲಿಟ್ಟಾಗಿನಿಂದಲೂ ಕೂಡ ಜನರಿಗೆ ವೈರಸ್ ಅಂದ್ರೆ ಸಾಕು ಜನರು ಹೆದರುತ್ತಾರೆ. ಅಲ್ಲದೇ ಸರ್ಕಾರ ತಕ್ಷಣವೇ ಕೂಡ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಸೂಚನೆ ನೀಡುತ್ತದೆ. ಇದೀಗ ಝೀಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ವೈರಸ್ ಹರಡುವುದುನ್ನು ನಿಲ್ಲಿಸಲು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, 2ರಿಂದ 7ದಿನ ಜ್ವರ, ಕಣ್ಣು ಕೆಂಪಾಗುವುದು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಕಂಡುಬಂದ ಪ್ರಕರಣಗಳಲ್ಲಿ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಎನ್‌ಐವಿಗೆ ಕಳುಹಿಸುವಂತೆ ಸೂಚಿಸಿದೆ.
ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಕುಟುಂಬದ ಸದಸ್ಯರ ಮಾದರಿಗಳನ್ನೂ ಕೂಡ ಎನ್‌ಐವಿಗೆ ಕಳುಹಿಸುವುದು. ಸುತ್ತಲಿನ 5 ಕಿ.ಮೀ.ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸುವುದು. ಸೋಕಿಂತರು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ಖಾಸಗಿ ವೈದ್ಯರು ಸಹ ಝೀಕಾ ವೈರಸ್ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಲಾಗಿದೆ.
ಇನ್ನು, ಈವರೆಗೆ ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಕುರಿತು ವರದಿಯಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಯ ಮಾದರಿಗಳ ಸಂಗ್ರಹದ ವೇಳೆ ಈಡಿಸ್ ಸೊಳ್ಳೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
