
ಮಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗು ಕರೆದ ತಕ್ಷಣ ತನ್ನೊಂದಿಗೆ ಸುತ್ತಾಡಲು ನಿರಾಕರಿಸಿದ ಕಾರಣ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಯುವಕನೊಬ್ಬ ಕಲ್ಲು ತೂರಿದ ಹಿನ್ನೆಲೆ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಂದೂರು ಬಳಿ ನಡೆದಿದೆ.
ಸುಳ್ಯ ನಿವಾಸಿ ಲೈಟಿಂಗ್ ಕೆಲಸ ಮಾಡುತ್ತಿದ್ದ ವಿವೇಕ್(18)ಪಿಜಿಗೆ ಕಲ್ಲು ಹೊಡೆದು ಸಾರ್ವಜನಿಕರಿಂದ ಏಟು ತಿಂದ ಯುವಕ.
ಈತ ಬೆಂದೂರು ಬಳಿ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ತನ್ನೊಂದಿಗೆ ತಿರುಗಾಡಲು ಬರುವಂತೆ ಕರೆ ಮಾಡಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ ಹಿನ್ನೆಲೆ ಕೋಪಗೊಂಡ ವಿವೇಕ್ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲೆಸೆದಿದ್ದಾನೆ. ಇದರಿಂದಾಗಿ ಪಿಜಿಯ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.
