
ಚಿಕ್ಕಬಳ್ಳಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 44ರ ಹಾರೋಬಂಡೆ ಬಳಿ ಎರಡು ಬೈಕ್‌ಗಳ ಡಿಕ್ಕಿಯಾಗಿ ಲಾರಿಯಡಿ ಸಿಲುಕಿದ ಹಿನ್ನೆಲೆ ಓವ ಸವಾರ ಸಾವನ್ನಪ್ಪಿ, ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಮೃತ ಸವಾರನನ್ನು ಶಿಡ್ಲಘಟ್ಟ ತಾಲೂಕಿನ ಮಿತ್ತನಹಳ್ಳಿ ಗ್ರಾಮದ ನಾಗರಾಜು (40) ಎಂದು ಗುರುತಿಸಲಾಗಿದೆ.
ಎರಡು ಬೈಕ್ ಸವಾರರು ರಸ್ತೆಯಲ್ಲಿ ಮಾತನಾಡಿಕೊಂಡು ಬರುತ್ತಿರುವಾಗ ಒಂದಕ್ಕೊಂದು ಡಿಕ್ಕಿಯಾಗಿ ರಸ್ತೆಗೆಸೆಯಲ್ಪಟ್ಟಿದ್ದು, ಒಂದು ಬೈಕ್ ನ ಸವಾರ ಲಾರಿಯಡಿಗೆ ಸಿಲುಕಿಕೊಂಡಿದ್ದಾರೆ. ಮತ್ತೊಂದು ಬೈಕ್ ರಸ್ತೆ ಬದಿಗೆ ಬಿದ್ದಿದ್ದು, ಲಾರಿಯಡಿ ಸಿಲುಕಿದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಇನ್ನು, ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ಅನ್ನು ಕೂಡ ಸರಿಪಡಿಸಿದರು.
