Home ಸುದ್ದಿಗಳು ಬೆಳ್ತಂಗಡಿ ಶಾಲೆಯಲ್ಲಿ ಓದು, ಬಡತನದ ಸವಾಲು, ಲೀನಾ ಸಿಕ್ವೇರಾ ಲೀಲಾವತಿಯಾಗಿ ಮೆರೆದ ಕಥೆಯೇ ಅಚ್ಚರಿ

ಬೆಳ್ತಂಗಡಿ ಶಾಲೆಯಲ್ಲಿ ಓದು, ಬಡತನದ ಸವಾಲು, ಲೀನಾ ಸಿಕ್ವೇರಾ ಲೀಲಾವತಿಯಾಗಿ ಮೆರೆದ ಕಥೆಯೇ ಅಚ್ಚರಿ

0
ಬೆಳ್ತಂಗಡಿ ಶಾಲೆಯಲ್ಲಿ ಓದು, ಬಡತನದ ಸವಾಲು, ಲೀನಾ ಸಿಕ್ವೇರಾ ಲೀಲಾವತಿಯಾಗಿ ಮೆರೆದ ಕಥೆಯೇ ಅಚ್ಚರಿ

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅವರು ಭಾರತೀಯ ಸಿನೆಮಾ ರಂಗಕ್ಕೆ ನೀಡಿದ್ದ ಕೊಡುಗೆ ಅಗಣಿತವಾಗಿದೆ. ಅನೇಕ ದಿಗ್ಗಜ ನಟರೊಂದಿಗೆ ನಾಯಕಿಯಾಗಿ, ಅಕ್ಕ, ತಂಗಿ, ಅಮ್ಮ, ಅಜ್ಜಿ ಇನ್ನೂ ಅನೇಕ ಪಾತ್ರ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಹಾಗೂ ಸಿನಿಮಾ ರಂಗಕ್ಕೆ ಕೊಡುಗೆ ನೀಡಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನಟಿ ಲೀಲಾವತಿ ಅವರು ರಂಗಭೂಮಿ ಕಲಾವಿದರಾಗಿದ್ದು ಸಿನೆಮಾ ಕ್ಷೇತ್ರದಲ್ಲಿ ವಿವಿಧ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ಕೌಟುಂಬಿಕ, ಐತಿಹಾಸಿಕ, ಸಾಮಾಜಿಕ ಇನ್ನು ಅನೇಕ ಪಾತ್ರವನ್ನು ಅಂತರಾಳಕ್ಕೆ ಹೊಕ್ಕು ಅಭಿನಯಿಸುವ ಬಹಳ ಪ್ರಬುದ್ಧ ನಟನೆ ಅವರಲ್ಲಿತ್ತು. ಹಾಗಾಗಿಯೇ ಸಿನೆಮಾ ರಂಗದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದಿಂದ ಕಲರ್ ಫುಲ್ ಜಮಾನದವರೆಗೂ ಅವರ ಅಭಿನಯ ಆಯಾ ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಾ ಸಾಗಿತ್ತು. ಇವರ ವೈಯಕ್ತಿಕ ಬದುಕಿನಿಂದ ನಿಂದನೆ ಒಳಗಾದ ಬಳಿಕ ಸಿನೆಮಾ ಕ್ಷೇತ್ರದ ಅವಕಾಶ ಕೂಡ ಕಡಿಮೆ ಯಾಗಿ ಬಳಿಕ ಮಗ ವಿನೋದ್ ರಾಜ್ ಅವರೊಂದಿಗೆ ತಮ್ಮದೆ ತೋಟದ ಮನೆಯಲ್ಲಿ ಕೃಷಿ ಇತರ ಕಾರ್ಯ ಚಟುವಟಿಕೆ ಮಾಡಿ ವೃದ್ಧಾಪ್ಯ ಕೂಡ ಕಳೆದರು. ಆದರೆ ಇಂದು ಈ ಹಿರಿಯ ನಟಿ ನಮ್ಮೊಂದಿಗೆ ಇಲ್ಲವಾಗಿದ್ದು ಕನ್ನಡ ಸಿನೆಮಾ ರಂಗ ಹಾಗೂ ಪ್ರೇಕ್ಷಕರಿಗೆ ಬಹಳ ನೋವು ತಂದ ವಿಷಯವಾಗಿದೆ‌.

ಬೆಳ್ತಂಗಡಿ‌ ತಾಲೂಕಿನಲ್ಲಿ ಕಳೆದ ಬಾಲ್ಯ
ಬೆಳ್ತಂಗಡಿ ಮೂಲದ ಈ ಮೇರು‌ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ತನ್ನ ಬದುಕು ಬದಲಾವಣೆ ಮಾಡಿಕೊಂಡ ಪರಿಯೇ ಅಚ್ಚರಿಯದ್ದು. ನಟಿ‌ ಲೀಲಾವತಿ ಅವರಿಗೆ ಬಾಲ್ಯವೇ ಬಡತನ ಪಾಠ ಕಲಿಸಿಕೊಟ್ಟಿತ್ತು. ಹಾಗಾಗಿ ಸರಳ ಬದುಕನ್ನೆ ಇಂದಿಗೂ ರೂಪಿಸಿಕೊಟ್ಟವರು. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮುರದಲ್ಲಿ ಜನಿಸಿದ ಇವರ ಮೂಲ ಹೆಸರು ಲೀನಾ ಸಿಕ್ವೇರಾ. ಮುಳಿಹುಲ್ಲಿನ ಮನೆಯಲ್ಲಿ ವಾಸವಾಗಿದ್ದ ಇವರು ಬಾಲ್ಯದಲ್ಲೇ ತಂದೆಯನ್ನು ಕಳೆದಕೊಂಡಿದ್ದರು. ಲೀಲಾವತಿ ಅವರಿಗೆ ಅವರ ಸಹೋದರಿ ಲೂಸಿ ಸಿಕ್ವೇರಾ ಅವರೇ ಆಸರೆಯಾಗಿದ್ದರು. ಅರ್ಧದಲ್ಲೆ ಶಾಲೆ‌‌ ಬಿಟ್ಟ ಲೀಲಾವತಿ ಅವರು ಒಂದು ಹೊತ್ತಿನ‌ ಊಟಕ್ಕಾಗಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಮನೆಯ ಯಜಮಾನಿಯ ತಲೆಯಲ್ಲಿ ಹೇನು ನೋಡಿದರೆ ಅಂದಿಗೆ ಲೀಲಾವತಿ ಅವರಿಗೆ ನಾಲ್ಕಾಣೆ ಕಾಸು ಸಿಗುತ್ತಿತಂತೆ‌ ಅನ್ನುವ ವಿಚಾರವನ್ನು ಅವರು ಹೇಳಿಕೊಂಡಿದ್ದರು.

ಬಾಲ್ಯದಲ್ಲೇ ಆಕ್ಟಿವ್

ಬಾಲ್ಯದಲ್ಲೆ ಬಹಳಷ್ಟು ಚುರುಕು, ಬುದ್ದಿವಂತೆ, ಸ್ಪಷ್ಟ ಮಾತು, ಉತ್ತಮ ನೃತ್ಯ ಪಟು, ಅಂದು ಬೆಳ್ತಂಗಡಿಯ ಮುರ ಮನೆಯಿಂದ 100 ಮೀಟರ್‌ ದೂರದ ನಾಲ್ಕನೇ ತರಗತಿವರೆಗೆ ಇದ್ದ ಸರಕಾರಿ ಶಾಲೆಯಲ್ಲೇ ಅವರ ಬಾಲ್ಯದ ವಿದ್ಯಾಭ್ಯಾಸ ಸಾಗಿತ್ತು. ಬೆಳ್ತಂಗಡಿಯ ಪರಿಚಯಸ್ತರು ಇಂದಿಗೂ ಇವರ ಬಗ್ಗೆ ಮಾತನಾಡುತ್ತಾರೆ‌. ಕಳೆದ 25 ವರ್ಷಗಳ ಹಿಂದೆ ವಿನೋದ್ ರಾಜ್‌ ಜತೆಗೆ ಲೀಲಾವತಿ ಬೆಳ್ತಂಗಡಿಯ ನಾವೂರಿಗೆ ಬಂದು ಮನೆ ತೆರಿಗೆ ಕಟ್ಟಿ, ಸುತ್ತ ಮುತ್ತ ಮನೆಮಂದಿಯೊಂದಿಗೆ ಮಾತಾಡಿ ತೆರಳಿದ್ದರಂತೆ.

ಲೀಲಾವತಿ ವಾಸ ಮಾಡ್ತಾ ಇದ್ದ ಆ ಮನೆ ಈಗ ಹೇಗಿದೆ?
ಲೀಲಾವತಿ ಅವರು ಬಾಲ್ಯದಲ್ಲಿ ಹೇಗಿದ್ದರೆಂಬ ಮಾತುಗಳನ್ನು ಇಂದಿಗೂ ಬೆಳ್ತಂಗಡಿಯ ಸುತ್ತ ಮುತ್ತಲಿನ ಜನ ಮಾತನಾಡಿಕೊಳ್ಳುತ್ತಾರೆ. ಇಂದು ಲೀಲಾವತಿ ಯವರು ವಾಸ ಮಾಡ್ತಾ ಇದ್ದ ನಾವೂರಿನ ಮುರದಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದು ಈಗ‌ ಮುಸಲ್ಮಾನ ಕುಟುಂಬವೊಂದು ಖರೀದಿಸಿ ಮನೆ ಮಾಡಿದ್ದಾರೆ. ಕ್ರೈಸ್ತ ಧರ್ಮದಲ್ಲಿದ್ದ ಹುಟ್ಟಿದ್ದ ಲೀನಾ ಸಿಕ್ವೇರಾ ಲೀಲಾವತಿಯಾಗಿ ಬದಲಾದರು. ಇಂದು ಸಿನಿಪಯಣದಲ್ಲಿ ಅತ್ಯಂತ ‌ಹಿರಿಯ ನಟಿ ಅನಿಸಿಕೊಂಡು ಇವರ ನಟನೆ, ಸರಳತೆ ಗೆ‌ ಇಡೀ ಜಗತ್ತೆ ಮೆಚ್ಚಿಕೊಂಡಿದೆ.ಇವರ‌ ಹಿರಿಮೆ ಬೆಳ್ತಂಗಡಿ ತಾಲೂಕಿಗೂ ಹೆಸರು ತಂದಿದೆ. ಇವರ ಸಾಹಸಗಥೆ, ಕಷ್ಟ, ಸವಾಲು, ಅವಮಾನಗಳನ್ನು ಮೆಟ್ಟಿನಿಂತು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿಗೆ ನಿಜವಾಗಿಯು ಮೆಚ್ಚುವಂತದ್ದೆ ಆಗಿದೆ.

 

LEAVE A REPLY

Please enter your comment!
Please enter your name here