
ಉಡುಪಿ: ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭ ಡಿ.16ರಂದು ಶ್ರೀಕೃಷ್ಣ ಮಠ ಮತ್ತು ಪೇಜಾವರ ಮಠದ ಸಮೀಪದಲ್ಲಿ ನಡೆಯಲಿದೆ.
ಈ ಬಗ್ಗೆ ಪೇಜಾವರ ಶ್ರೀಗಳ ಗುರುವಂದನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಯಶ್‌ಪಾಲ್ ಎ.ಸುವರ್ಣ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಬೆಳಿಗ್ಗೆ ಶ್ರೀಕೃಷ್ಣ ಮಠದಲ್ಲಿ ಲಕ್ಷ ಕೃಷ್ಣ ಮಂತ್ರ ಜಪ ಯಾಗ ಮತ್ತು ಗೋ ಸೂಕ್ತಯಾಗ, ಮಧ್ಯಾಾಹ್ನ 12.30ರಿಂದ ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಸಂಜೆ 3ರಿಂದ ಜೋಡುಕಟ್ಟೆಯಿಂದ ಆಕರ್ಷಕ ಶೋಭಾ ಯಾತ್ರೆ ನಡೆಯಲಿದೆ. 5ಗಂಟೆಯಿಂದ ರಥಬೀದಿಯ ಶ್ರೀ ಪೇಜಾವರ ಮಠದ ಮುಂಭಾಗದಲ್ಲಿ ಬೃಹತ್ ಅಭಿವಂದನ ಸಮಾರಂಭ ನಡೆಯಲಿದೆ. ಸಂಜೆ 7.30ರಿಂದ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಮಹೇಶ್ ಕಾಳೆ ಮತ್ತು ಬಳಗ ಪುಣೆ ಇವರಿಂದ ಹಿಂದುಸ್ಥಾನಿ ಸಂಗೀತ ಮತ್ತು ಭಜನೆ ಹಾಗೂ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅದೇ ವೇದಿಕೆಯಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ಅಷ್ಟಮಠಾಧೀಶರು ಭಾಗವಹಿಸಿ ಶುಭಸಂದೇಶ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶ್ರೀಪಾದ್ ಯೆಸ್ಸೋ ನಾಯಕ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಾಳ್ಕರ್ ಸಹಿತ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಈ ವೇಳೆ ಸುವರ್ಣಾಭಿಷೇಕ ಸಹಿತ ವಿಶಿಷ್ಟ ರೀತಿಯಲ್ಲಿ ಅಭಿವಂದನೆ ನಡೆಯಲಿದೆ ಎಂದರು.
ಸಮಿತಿ ಉಪಾಧ್ಯಕ್ಷರಾದ ಸಿವಿಲ್ ಎಂಜಿನಿಯರ್ ಕಾಪು ವಾಸುದೇವ ಶೆಟ್ಟಿ, ಸಂಗೀತ ಸಭಾ ಉಡುಪಿ ಅಧ್ಯಕ್ಷ ಟಿ. ರಂಗ ಪೈ, ವಿದ್ಯೋದಯ ಟ್ರಸ್ಟ್ ಕಾರ್ಯದರ್ಶಿ ಕೆ. ಗಣೇಶ್ ರಾವ್, ವಿ.ಹಿಂ.ಪ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ , ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ಪ್ರಧಾನ ಕಾರ್ಯದರ್ಶಿ ಜಿ.ವಾಸುದೇವ ಭಟ್ ಪೆರಂಪಳ್ಳಿಿ, ಸಂಘಟನ ಕಾರ್ಯದರ್ಶಿ ಚಂದ್ರೇಶ್ ಪಿತ್ರೋಡಿ, ಸದಸ್ಯರಾದ ರಾಘವೇಂದ್ರ ಭಟ್, ಸತೀಶ್ ಕುಮಾರ್ ಭಾಗಿಯಾಗಿದ್ದರು.
