
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ‘ಬುರ್ಖಾ ತೆಗೆದು ಒಳಗೆ ಬನ್ನಿ’ ಎಂದು ಬರೆದಿರುವ ಸೂಚನಾ ಫಲಕ ಒಂದು ಕಾಣಿಸಿಕೊಂಡಿದೆ.
ಈ ಫಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಒಂದು ವರ್ಷದ ಹಿಂದೆಯೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಸೂಚನಾ ಫಲಕ ಹಾಕಲಾಗಿತ್ತು. ಆದರೆ ಈ ಸೂಚನಾ ಫಲಕದ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದೆ ಹರಿಬಿಟ್ಟಿದ್ದಾರೆ.
ವೈರಲ್ ಆದ ಫೋಟೋ ಪುತ್ತೂರು ಶಾಸಕರು ಇರುವ ವಾಟ್ಸ್ ಅಪ್ ಗ್ರೂಪ್ ನಲ್ಲೂ ಕಾಣಿಸಿಕೊಂಡಿತ್ತು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆಗೆಯುವಂತೆ ಆಸ್ಪತ್ರೆಯ ಸಿಬ್ಬಂದಿ ಮೇಲೆ ಒತ್ತಡ ಹೇರಲಾಯಿತು. ಒತ್ತಡದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಸೂಚನಾ ಫಲಕ ತೆರವುಗೊಳಿಸಿದ್ದಾರೆ.
