
ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲದ ಅಂಗಸಂಸ್ಥೆ ತುಶಿಮಾಮ ಕಡಿಯಾಳಿ ನೇತೃತ್ವದಲ್ಲಿ ಶ್ರೀಕೃಷ್ಣ ದೇವರಿಗೆ ವಿಷ್ಣುಸಹಸ್ರನಾಮಾವಳಿ ಪಾರಾಯಣ ಪೂರ್ವಕ, ಪರ್ಯಾಯ ಪೀಠಾಧೀಶ ಪರಮಪೂಜ್ಯ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ‘ಕೋಟಿ ತುಳಸಿ ಅರ್ಚನೆ’ಯನ್ನು ಡಿಸೆಂಬರ್ 31ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತುಶಿಮಾಮ ಕಾರ್ಯಾಧ್ಯಕ್ಷ ಪ್ರದೀಪ್ ಕಲ್ಕೂರ್ ತಿಳಿಸಿದರು.
ಉಡುಪಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 31ರಂದು ಬೆಳಿಗ್ಗೆ 7.30ಕ್ಕೆ ಮೆರವಣಿಗೆಯ ಮೂಲಕ ಶ್ರೀ ಕೃಷ್ಣ ನ ಮೂರ್ತಿಯನ್ನು ತಂದು ರಾಜಾಂಗಣದ ಅಲಂಕೃತ ವೇದಿಕೆಯಲ್ಲಿ ಪ್ರತಿಷ್ಟಾಪಿಸಿ ಪರ್ಯಾಯ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿಪ್ರ ಮಹಿಳೆಯರಿಂದ ಲಕ್ಷ್ಮೀಶೋಭಾನೆ ಪಠನ ನಡೆಯಲಿದೆ. ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಂಗಳಕಾರ್ಯಕ್ಕೆ ಸಾಧ್ಯವಾಗುವಷ್ಟು ತುಳಸಿಯನ್ನು ಡಿ.30ರ ಒಳಗಾಗಿ ಶ್ರೀಮಠಕ್ಕೆ ಒಪ್ಪಿಸಬೇಕು. ಎಲ್ಲಾ ಜಾತಿ ಧರ್ಮದವರೂ ತುಳಸಿ ನೀಡಬಹುದು. ಈ ಕೋಟಿ ತುಳಸಿ ಅರ್ಚನೆಗೆ ಬೇಕಾದಷ್ಟು ತುಳಸಿ, ಒಂದೇ ಸ್ಥಳದಲ್ಲಿ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಎಲ್ಲರೂ ಸಾಧ್ಯವಿದ್ದಷ್ಟು ತುಳಸಿಯನ್ನು ತಮ್ಮ ಊರಿನಿಂದ ಕಳುಹಿಸಿಕೊಡಬೇಕು. ಈ ಕಾರ್ಯಕ್ರಮಗಳಿಗೆ ಎಲ್ಲಾ ವಿಪ್ರ ಬಂಧುಗಳು ಹಾಗೆಯೇ ವಿಪ್ರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತುಶಿಮಾಮ ಕಡಿಯಾಳಿ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಉಡುಪಿ ಜಿಲ್ಲೆಯ ಸಮಸ್ತ ಬ್ರಾಹ್ಮಣ ವಲಯದ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ (9743573464, 8317390641) ಸಂಪರ್ಕಿಸಬಹುದು.
ತುಶಿಮಾಮ ಕಡಿಯಾಳಿ ಅಂಗಸಂಸ್ಥೆಯ ಅಧ್ಯಕ್ಷ ರಘುಪತಿ ಉಪಾಧ್ಯ, ಗೌರವ ಸಲಹೆಗಾರರಾದ ರಂಜನ್ ಕಲ್ಕೂರ್, ಕೆ. ಅರವಿಂದ್ ಆಚಾರ್ಯ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣ ಮೂರ್ತಿ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.
