
ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಗೆ ತೆರಳುವಾಗ ಮತ್ತೊಂದು ಗೋದ್ರಾದಂಥ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಪಕ್ಷ ನೇರ ಹೊಣೆಯಾಗುತ್ತೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರದ ಉದ್ಘಾಟನೆಗೆ ತೆರಳುವಾಗ ಮತ್ತೊಂದು ಗೋದ್ರಾ ನಡೆಯಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿ.ಕೆ. ಹರಿಪ್ರಸಾದ್ ಅಂಥ ಘಟನೆಯಾಗಲಿದೆ ಅನ್ನೋದಕ್ಕೆ ನನ್ನ ಬಳಿ ಮಾಹಿತಿ ಇದೆ ಎಂದಿದ್ದಾರೆ. ಆ ಮೂಲಕ ಅಂದು ಕರಸೇವೆ ಮಾಡಿ ವಾಪಾಸಾಗುತ್ತಿದ್ದ ವೇಳೆ ಪೆಟ್ರೋಲ್ ಬಾಂಬ್ ಎಸೆದಿರೋದನ್ನು ನೆನೆಪಿಸಿದ್ದಾರೆ. ಗೋದ್ರಾದಂಥ ಘಟನೆ ರಾಜ್ಯದಲ್ಲಿ ಅಥವಾ ದೇಶದಲ್ಲಿ ನಡೆದರೆ ನೇರವಾಗಿ ಕಾಂಗ್ರೆಸ್ ಕಾರಣವಾಗುತ್ತೆ ಎಂದಿದ್ದಾರೆ.
ಈ ಹೇಳಿಕೆಯ ಹಿಂದೆ ಕಾಂಗ್ರೆಸ್ ಬಹುದೊಡ್ಡ ಪಿತೂರಿ ಮಾಡಿದೆ. ೨೦೦೨ರಲ್ಲಿ ಗೋದ್ರಾದಲ್ಲಿ ಭೋಗಿಗೆ ಬೆಂಕಿ ಹಚ್ಚಿದ ಘಟನೆ ಮತ್ತು ಶ್ರೀರಾಮ ಕಾಲ್ಪನಿಕ ಎನ್ನುವಂಥ ಕಾಂಗ್ರೆಸ್ ರಾಮಮಂದಿರ ಉದ್ಘಾಟನಾ ಸಮಯದಲ್ಲಿ ಗೋದ್ರಾದ ಘಟನೆ ಹೇಳುತ್ತಾ ಜನರಲ್ಲಿ ಭಯ ಮೂಡಿಸುವ ಷಡ್ಯಂತ್ರ ಮಾಡಿದೆ. ಇಂಥ ಘಟನೆ ನಡೆಯುತ್ತೆ ಮತ್ತು ಅದಕ್ಕೆ ಆಧಾರ ಇದೆ ಎಂದು ಹೇಳುವವರು, ಅದಕ್ಕೆ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
