
ಉಡುಪಿ: ಭಾವಿ ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪುರಪ್ರವೇಶ ಹಾಗೂ ಪೌರಸಮ್ಮಾನ ಜನವರಿ 8ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ತಿಳಿಸಿದರು.
ಈ ಬಗ್ಗೆ ಶನಿವಾರ ಪುತ್ತಿಗೆ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 8ರಂದು ಸಂಜೆ 4 ಗಂಟೆಗೆ ನಗರದ ಜೋಡುಕಟ್ಟೆಯಿಂದ ಪುರಮೆರವಣಿಗೆ ನಡೆಯಲಿದೆ. ಪುರಪ್ರವೇಶದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಸಮಿತಿಗಳ ಸಭೆ ನಡೆಸಲಾಗಿದ್ದು, ಪೂರ್ಣ ಪ್ರಮಾಣದ ತಯಾರಿ ನಡೆಸಲಾಗಿದೆ ಎಂದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಮಾತನಾಡಿ, ಸ್ವಾಮೀಜಿ ಅವರನ್ನು ಸ್ವಾಗತಿಸುವ ಕಾರ್ಯ ಅದ್ದೂರಿಯಾಗಿ ನಡೆಯಲಿದೆ. ಸ್ವಾಮೀಜಿ ಅವರಿಗೆ ಪೌರ ಸಮ್ಮಾನ ಅಂದು ಸಂಜೆ 7 ಗಂಟೆಗೆ ನಡೆಯಲಿದೆ. ಪೌರ ಸಮ್ಮಾನಕ್ಕೆ ನಗರಸಭೆ, ಜಿಲ್ಲಾಡಳಿತ, ಪೂರ್ಣ ಸಹಕಾರ ನೀಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪೌರಸಮ್ಮಾನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪುರಮೆರವಣಿಗೆ ಜೋಡುಕಟ್ಟೆಯಿಂದ ಹಳೆ ಡಯಾನ, ಕೆಎಂ ಮಾರ್ಗ, ತ್ರೀವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಪುತ್ತಿಗೆ ಮಠಕ್ಕೆ ಬರಲಿದೆ. ಹತ್ತಾರು ಸಂಘ ಸಂಸ್ಥೆಗಳು, ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಎಲ್ಲಾ ಸಮಿತಿಗಳು ಪರ್ಯಾಯದ ಪೂರ್ವ ತಯಾರಿಯನ್ನು ನಡೆಸ್ತಾ ಇದೆ. ಎಲ್ಲಾ ಸಮಾಜ ಬಾಂದವರ, ಎಲ್ಲಾ ಸಂಘಟನೆಗಳ ಪ್ರಮುಖರ ಜತೆ ಸಭೆಗಳನ್ನು ನಡೆಸಲಾಗಿದೆ. ಜನವರಿ 9ರಿಂದ ದಿನನಿತ್ಯ ವಿವಿಧ ಹೊರೆಕಾಣಿಕೆ ಆಗಮಿಸಲಿದೆ. ಹೊರೆ ಕಾಣಿಕೆಗೆ ನಿಗದಿತ ಸ್ಥಳ ನಿರ್ಮಾಣ ಮಾಡಲಾಗಿದೆ ಎಂದರು.
ಜನವರಿ 18ರಂದು ಪರ್ಯಾಯ ದರ್ಬಾರ್ ನಡೆಯಲಿದೆ. ಸಂಜೆಯ ದರ್ಬಾರ್ ನಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು, ಉಪಮುಖ್ಯಮಂತ್ರಿ ಅವರೂ ಭಾಗವಹಿಸುವ ಸಾಧ್ಯತೆ ಇದೆ. ಕೇಂದ್ರದ ಸಚಿವರೂ ಭಾಗವಹಿಸಲಿದ್ದಾರೆ ಎಂದರು.
ಪುತ್ತಿಗೆ ಪರ್ಯಾಯ ಅತ್ಯಂತ ವಿಜೃಂಭನೆಯಿಂದ ನಡೆಯಲಿದೆ. ನಗರದ ವಿವಿಧ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ರಾಜಾಂಗಣದಲ್ಲಿ ಜನವರಿ 23ರವರೆಗೂ ದಿನನಿತ್ಯ ಕಾರ್ಯಕ್ರಮ ನಡೆಯಲಿದೆ. ಪರ್ಯಾಯದಂದು ಬಹಳ ಆಕರ್ಷಕ ಟ್ಯಾಬ್ಲೋಗಳು, ಇಲಾಖೆ ಗಳ ಟ್ಯಾಬ್ಲೋಗಳು ಮೆರುಗು ಹೆಚ್ಚಿಸಲಿದೆ ಎಂದರು.
ಸಮಿತಿಯ ಕಾರ್ಯದರ್ಶಿ ಐಕಳಬಾವ ಡಾ. ದೇವಿ ಪ್ರಸಾದ್ ಶೆಟ್ಟಿ, ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರಂಜನ್ ಕಲ್ಕೂರ್ ಉಪಸ್ಥಿತರಿದ್ದರು. ರಮೇಶ್ ಭಟ್ ನಿರೂಪಿಸಿ, ವಂದಿಸಿದರು.
