
ಉಡುಪಿ: ಮುಂದಿನ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಷ್ಟ್ರದ ಮೀನುಗಾರ ಸಮಾಜದ ನಾಯಕರಾದ ಪ್ರಮೋದ್ ಮಧ್ವರಾಜ್ ಅವರನ್ನು ಆಯ್ಕೆ ಮಾಡಬೇಕು ಎಂದು ಅಖಿಲ ಭಾರತೀಯ ಮೀನುಗಾರರ ಸಂಘ ಆಗ್ರಹಿಸಿದೆ.
ಈ ಬಗ್ಗೆ ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಖಿಲ ಭಾರತೀಯ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ, ಪ್ರಮೋದ್ ಮಧ್ವರಾಜ್ ಅವರು ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದು, 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ, 12 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಸಮಾಜದ ಹಿತಾಸಕ್ತಿಗಳ ಬಗ್ಗೆ ಪರಿಣಾಮಕಾರಿಯಾಗಿ ಪ್ರತಿನಿಧಿಸಿ ಬೆಳವಣಿಗೆಗೆ ಮತ್ತು ಸಾಮಾಜಿಕ ಆರ್ಥಿಕ ಪ್ರಗತಿಗೆ ಭವಿಷ್ಯದ ಯೋಜನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.
ವಿಶ್ವ ನಾಯಕರಾದ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ದೇಶದ ಅದ್ಭುತ ಪ್ರಗತಿ, ದೇಶದ ರಕ್ಷಣೆ, ಭಯೋತ್ಪಾದನೆ ನಿಗ್ರಹ, ವಿದೇಶಿ ನೀತಿ, ಭ್ರಷ್ಟಾಚಾರ ರಹಿತ ಆಡಳಿತ, ಭವಿಷ್ಯದ ಯೋಜನೆ ಮತ್ತು ಬಿಜೆಪಿಯ ನೈಜ ರಾಷ್ಟ್ರೀಯತೆಗೆ ಆಕರ್ಷಿತರಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಮ್ಮ ಸದುದ್ದೇಶವನ್ನು ಸಮರ್ಥಿಸುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಮೀನುಗಾರರ ಪ್ರತಿನಿಧಿಯನ್ನು ಹೊಂದುವುದು ಬಹಳ ಮುಖ್ಯ ಎಂದರು.
ಪ್ರಸ್ತುತ ಸಂಸದೆ ಆಗುರುವ ಶೋಭಾ ಕರಂದ್ಲಾಜೆ ಅವರು ರಾಜ್ಯ ಮಟ್ಟದ ನಾಯಕರು. ಅವರು ರಾಜ್ಯದ ಯಾವ ಕ್ಷೇತ್ರದಲ್ಲಿಯೂ ಚುನಾವಣೆಗೆ ಸ್ಪರ್ಧಿಸಬಹುದು. ನಾವು ರಾಜ್ಯದಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಕೇಳುತ್ತಿದ್ದೇವೆ. ಹೀಗಾಗಿ ಶೋಭಾ ಕರಂದ್ಲಾಜೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ನಮ್ಮೆಲ್ಲ ಬೇಡಿಕೆಗೆ ಸ್ಪಂಧಿಸಿ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ವಿವಿಧ ಮೀನುಗಾರರ ಸಂಘಟನೆ ಮುಖಂಡರಾದ ಸಾಧು ಸಾಲ್ಯಾನ್, ಕೃಷ್ಣ ಸುವರ್ಣ, ಮೋಹನ್ ಕುಂದರ್, ಸುಭಾಷ್ ಮೆಂಡನ್, ಯೋಗೀಶ್ ಸಾಲ್ಯಾನ್, ರವಿರಾಜ್ ಸುವರ್ಣ, ಜಗನ್ನಾಥ್ ಕುಂದರ್, ಜಗನ್ನಾಥ ಅಮೀನ್, ನಾಗರಾಜ್ ಸುವರ್ಣ ಉಪಸ್ಥಿತರಿದ್ದರು.
