
ಉಡುಪಿ: ಪೆರ್ಡೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಬಂಟರ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮ ಫೆ.11ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಬಂಟರ ಸಂಘ ಪೆರ್ಡೂರು ವಲಯ ಇದರ ಅಧ್ಯಕ್ಷ ಶಾಂತಾರಾಮ ಸೂಡ ಕೆ. ತಿಳಿಸಿದ್ದಾರೆ.
ಗುರುವಾರ ಪೆರ್ಡೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ರಿಂದ ಬಂಟರ ಭವನದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಬಂಟರ ಸಮುದಾಯದ ರಾಮಕೃಷ್ಣ ಗ್ರೂಪ್ ಆಫ್ ಹೊಟೇಲ್ ನ ಸುಬ್ಬಯ್ಯ ಶೆಟ್ಟಿ, ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಹೆಚ್ ಎಸ್ ಬಲ್ಲಾಲ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ, ಐಕಳ ಹರೀಶ್ ಶೆಟ್ಟಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ಪೆರ್ಡೂರಿನ ಹಚ್ಚ ಹಸಿರಿನ ಪರಿಸರದ ನಡುವೆ 3.5 ಎಕರೆ ಜಾಗದಲ್ಲಿ ಈ ಸಮುದಾಯ ಭವನ ವಿಶಾಲವಾಗಿ ಮೂಡಿ ಬಂದಿದೆ. ಪೆರ್ಡೂರು, ಬೈರಂಪಳ್ಳಿ, 41ನೇ ಶಿರೂರು, ಬೆಳ್ಳರ್ಪಾಡಿ ಗ್ರಾಮಗಳನ್ನು ಒಳಗೊಂಡ ಪೆರ್ಡೂರು ಬಂಟ ಸಂಘದ, ಕಾರ್ಯಕಾರಿ ಸಮಿತಿಯ ಸದಸ್ಯರ ಪ್ರಯತ್ನ, ಎಲ್ಲಾ ಸದಸ್ಯರ ನಿರಂತರ ಪರಿಶ್ರಮ ಹಾಗೂ ದಾನಿಗಳ ನೆರವಿನಿಂದ ಇಂದು ಗ್ರಾಮೀಣ ಪ್ರದೇಶವಾದ ಪೆರ್ಡೂರಿನಲ್ಲಿ ಭವ್ಯವಾದ ಸಮುದಾಯ ಭವನ ತಲೆ ಎತ್ತಿ ನಿಂತಿದೆ ಎಂದರು.
ಉಡುಪಿ ತಾಲೂಕಿನ ಗ್ರಾಮೀಣ ಬಂಟರ ಸಂಘಗಳಲ್ಲಿ ಒಂದಾಗಿರುವ ಪೆರ್ಡೂರು ಬಂಟರ ಸಂಘ ತೀರ ಗ್ರಾಮೀಣ ಪ್ರದೇಶದಲ್ಲಿದ್ದು, ಮದ್ಯಮ ಹಾಗೂ ಬಡಕುಟುಂಬದ ಬಂಟರು ಹೆಚ್ಚಾಗಿದ್ದಾರೆ. ಆದರೆ ನಮ್ಮ ತಂಡ ಇಂದು ದೊಡ್ಡ ಸಾಧನೆ ಮಾಡಿ ಉಡುಪಿ ಜಿಲ್ಲೆಯಲ್ಲಿಯೇ ಅತ್ಯಾಕರ್ಷಕ ಸಮುದಾಯ ಭವನ ನಿರ್ಮಾಣ ಮಾಡಿ ರಾಜ್ಯವೇ ಗಮನಿಸುವಂತೆ ಮಾಡಿದೆ. ಪೆರ್ಡೂರು ಹಾಗೂ ಸುತ್ತಮುತ್ತಲಿನ ಜನತೆಗೆ ದೂರದ ಪಟ್ಟಣದ ಸೊಬಗು ಆತ್ಯಾಧುನಿಕ ವ್ಯವಸ್ಥೆಯ ಸಭಾಭವನವನ್ನು ತನ್ನೂರಿನಲ್ಲೆ ಕಾಣುವ ಸಂಭ್ರಮಿಸುವ ಸುವರ್ಣ ಅವಕಾಶ ಪೆರ್ಡೂರು ಬಂಟ ಸಂಘ ಮಾಡಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ
ಫೆ. 11ರಂದು ಬೆಳಿಗ್ಗೆ 8.30ರಿಂದ ತುಳುನಾಡ ಗಾನಗಾಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಅವರಿಂದ ಭಕ್ತಿ ಸಂಗೀತ ಹಾಗೂ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಶಂಕರನಾರಾಯಣ ಇವರ ಸಾರಥ್ಯದಲ್ಲಿ ತೆಂಕು ಮತ್ತು ಬಡಗು ತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ಅಮೋಘ ಯಕ್ಷಗಾನ ಪಾಂಚಜನ್ಯ- ಅಸಿಕಾ ಪರಿಣಯ ಪ್ರದರ್ಶನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘ ಪೆರ್ಡೂರು ಮಂಡಲ ಇದರ ಪ್ರ.ಕಾರ್ಯದರ್ಶಿ ಶ್ರೀಧರ ಶೆಟ್ಟಿ ಕುತ್ಯಾರುಬೀಡು, ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಸುಭಾಷ್ ಶೆಟ್ಟಿ ದೂಪದಕಟ್ಟೆ, ರಾಜಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಸುರೇಶ ಹೆಗ್ಡೆ, ಶಿವರಾಮ್ ಶೆಟ್ಟಿ ಬೆಳ್ಳರ್ಪಾಡಿ, ಮಹೇಶ್ ಶೆಟ್ಟಿ ಪೈಬೆಟ್ಟು ಉಪಸ್ಥಿತರಿದ್ದರು.
