
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಪದ್ಮರಾಜ್ ಇಂದು(ಏಪ್ರಿಲ್ 3) ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದ್ಮರಾಜ್ ಮಂಗಳವಾರ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದ ಪ್ರಚಾರ ಆರಂಭಿಸಿದ್ದಾರೆ. ಆ ಬಳಿಕ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 11 ರಂದು ಸುಳ್ಯ ವಿಧಾನಸಭಾ ಕ್ಷೇತ್ರ, ಏಪ್ರಿಲ್ 12 ರಂದು ಮೂಲ್ಕಿ, ಏಪ್ರಿಲ್ 13 ರಂದು ಪುತ್ತೂರು, 14 ರಂದು ಮಂಗಳೂರು ದಕ್ಷಿಣ, ಏಪ್ರಿಲ್ 15 ರಂದು ಉಳ್ಳಾಲ, 16 ರಂದು ಮಂಗಳೂರು ಉತ್ತರ, ಏಪ್ರಿಲ್ 17 ರಂದು ಬೆಳ್ತಂಗಡಿ, 18 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಎರಡನೇ ಸುತ್ತಿನ ಪ್ರಚಾರವು ಏಪ್ರಿಲ್ 19 ರಿಂದ ನಡೆಯಲಿದೆ ಮತ್ತು ಪ್ರಚಾರವು ಏಪ್ರಿಲ್ 24 ರವರೆಗೆ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯಲ್ಲಿ ಪಕ್ಷದ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೂಲಕ ಚಾಲನೆ ನೀಡಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದು, ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು.
