
ಉಡುಪಿ: ಅಯೋಧ್ಯೆಯ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗಿಯಾಗಿ ಇದರಿಂದ ಪ್ರೇರಿತರಾದ ಶೀರೂರು ಮಠದ ಪೀಠಾಧಿಪತಿಗಳಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಈ ಬಾರಿ ಹರಿಖಂಡಿಗೆಯ ಶ್ರೀ ಶೀರೂರು ಮೂಲ ಮಠದಲ್ಲಿ ಶ್ರೀ ರಾಮ ನವಮಿ ಮಹೋತ್ಸವವನ್ನು ಎ.9ರಿಂದ ಎ.18ರವರೆಗೆ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಿದ್ದಾರೆ ಎಂದು ಶೀರೂರು ಮಠದ ದಿವಾನರಾದ ಡಾ ಎಂ.ಉದಯ ಕುಮಾರ್ ಸರಳತ್ತಾಯ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಸುಮಾರು 70 ವರ್ಷಗಳ ಹಿಂದೆ ಶ್ರೀ ಶೀರೂರು ಮಠದ ಪರಂಪರೆಯಲ್ಲಿ ವಿರಾಜಮಾನರಾಗಿದ್ದ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದರು ಪ್ರಾರಂಭಿಸಿದ್ದ ಶ್ರೀರಾಮ ನವಮಿ ರಥೋತ್ಸವದ ಸವಿನೆನಪಿಗಾಗಿ ಹಮ್ಮಿಕೊಂಡ ಈ ಮಹೋತ್ಸವವು ಎ.9ರಿಂದ ಮೊದಲ್ಗೊಂಡು ಪ್ರತೀದಿನ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾಾರಂಭವಾಗಿ ಸಂಜೆ 5.30ರಿಂದ ರಾತ್ರಿ 8ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉತ್ಸವಾದಿಗಳೊಂದಿಗೆ ನಡೆಯಲಿದೆ ಎಂದರು.
ಎ.11ರ ಸಂಜೆ 4ಕ್ಕೆ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ಶ್ರೀಪಾದರು, 13ಕ್ಕೆ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, 14ರಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, 17ರಂದು ನಡೆಯುವ ರಥೋತ್ಸವದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿವರ:
ಎ.10ರಿಂದ 18ರವರೆಗೆ ಹಯಗ್ರೀವ ಮಂತ್ರ ಹೋಮ, ಶಾಕಲ ಋಕ್ ಸಂಹಿತಾಯಾಗ, ಘೋಷ್ಠಿಪಾರಾಯಣ, ಲಕ್ಷ್ಮೀಶೋಭಾನೆ ಗಾಯನ ನಡೆಯಲಿದ್ದು, ಎ.13ರಂದು ಭೂತರಾಜರ ಪೂಜೆ, ಎ.17ರಂದು ಅನ್ನಸಂತರ್ಪಣೆ ನಡೆಯಲಿದೆ. ಎ.18ರಂದು ಬೆಳಗ್ಗೆ 9ಕ್ಕೆ ಹಗಲು ರಥೋತ್ಸವ, ಅವಭೃತ ಸ್ನಾನ ಹಾಗೂ ರಾತ್ರಿ 9ಕ್ಕೆ ಬೊಬ್ಬರ್ಯ ನೇಮ ನಡೆಯಲಿದೆ.
ಎ.9ರಂದು ಕುಣಿತ ಭಜನೆ ಮತ್ತು ಭಕ್ತಿರಸಮಂಜರಿ, ಎ.10ರಂದು ಕುಂಜಾರುಗಿರಿ ಬಳಗದಿಂದ ಛತ್ರಪತಿ ಶಿವಾಜಿ ಐತಿಹಾಸಿಕ ನಾಟಕ, ಎ.11ರಂದು ಶ್ರೀಗಂಗಾ ಶಶಿಧರನ್ ಅವರ ವಯಲಿನ್ ವಾದನ, ಎ.12ರಂದು ಮಾರ್ಪಳ್ಳಿ ಚಂಡೆ ಬಳಗದವರಿಂದ ಊರ ಪರ್ಬ ನಾಟಕ, ಎ.13ರಂದು ಸುಧೀರ್ ಕೊಡವೂರು ಅವರ ತಂಡದಿಂದ ಶ್ರೀನರಸಿಂಹ ನೃತ್ಯ ರೂಪಕ, ಎ.14ರಂದು ಕುದ್ರೋಳಿ ಗಣೇಶ್ ಅವರಿಂದ ಮ್ಯಾಜಿಕ್ ಶೋ, ಎ.15ರಂದು ಮೈಸೂರು ರಾಮಚಂದ್ರ ಆಚಾರ್ಯ ಅವರಿಂದ ಭಕ್ತಿ ಸಂಗೀತ, ಎ.16ರಂದು ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ಹಿಂದುಸ್ಥಾನಿ ಗಾಯನ, ಎ.17ರಂದು ಸಾಯಿ ವಿಘ್ನೇಶ್ ಅವರಿಂದ ಸಂಗೀತ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಪ್ರತೀ ದಿನ ಸಂಜೆ ಭಕ್ತರಿಗೆ ಫಲಹಾರದ ವ್ಯವಸ್ಥೆ ಮತ್ತು ಭಕ್ತರ ಅನುಕೂಲಕ್ಕಾಗಿ ಸಂಜೆ 5.30ರಿಂದ ರಾತ್ರಿ 9ರವರೆಗೆ ಶೀರೂರಿನಿಂದ ಉಡುಪಿ ತನಕ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಮ್ಯಾನೇಜರ್ ವಾಸುದೇವ ಆಚಾರ್ಯ, ಶೀರೂರು ಕೆಳಮಠದ ವಾಮನಮೂರ್ತಿ, ಪ್ರಮುಖರಾದ ಶ್ರೀಶ ಭಟ್ ಕಡೆಕಾರ್, ಅಶ್ವಥ್ ಭಾರಧ್ವಜ್ ಪತ್ರಿಕಾಗೋಷ್ಠಿಯಲ್ಲಿದ್ದರು.
