
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು, ಇದೀಗ ಎಪ್ರಿಲ್ 9ರ ಮಂಗಳವಾರದಂದು ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ನಿರ್ಧರಿಸಲಾಗಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿಯವರು ಹೇಳಿದರು.
ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕೀ ಇರುವ ಕ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಹಾಗೂ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಭಾಗವಹಿಸಲು ತೊಂದರೆಯಾಗುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೇ ಜೂನ್ 12 ರಿಂದ ದಕ್ಷಿಣಾಯಣ ಪ್ರಾರಂಭವಾಗುವುದರಿಂದ ಪ್ರತಿಷ್ಠೆಗೆ ಸೂಕ್ತವಾದ ದಿನಗಳು ಲಭ್ಯವಾಗಿರುವುದಿಲ್ಲ. ಆದುದರಿಂದ ಅಭಿವೃದ್ಧಿ ಸಮಿತಿಯು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಶ್ರೀ ಕುಮಾರಗುರು ತಂತ್ರಿಯವರೊಂದಿಗೆ ಗಳೊಂದಿಗೆ ಚರ್ಚಿಸಿ 2025ರ ಜನವರಿ 14ರ ನಂತರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸುವುದೆಂದು ನಿರ್ಧಾರ ಮಾಡಲಾಡಲಾಗಿದೆ.
ಈ ಕುರಿತು, ವಿದ್ವಾನ್ ಶ್ರೀ ಕುಮಾರಗುರು ತಂತ್ರಿಯವರ ನಿರ್ದೇಶನದಂತೆ ಇದೇ ಬರುವ ಏಪ್ರಿಲ್ 9ರ ಮಂಗಳವಾರದಂದು ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ.
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಮ್ಮನ ಭವ್ಯ ಗರ್ಭಗುಡಿಯ ದಿವ್ಯ ಸಾನಿಧ್ಯದಲ್ಲಿ ಕೋಣಗಳಿಂದ ಉಳುಮೆ ಮಾಡುವ ಮೂಲಕ ನವ ಧಾನ್ಯಗಳ ಬಿತ್ತನೆ ಮಾಡುವುದು. ಮುಂದಿನ 18 ದಿನಗಳಲ್ಲಿ ಧಾನ್ಯಗಳು ಮೊಳಕೆಯೊಡೆದಾಗ ಗೋ ನಿವಾಸಕ್ಕಾಗಿ ಗರ್ಭಗುಡಿಯಲ್ಲಿ 9 ಅಥವಾ 18 ಗೋವುಗಳನ್ನು ಪೂಜಿಸಿ ಅವುಗಳಿಗೆ ಧಾನ್ಯಗಳನ್ನು ಮೇಯಲು ಬಿಡುವುದು. ಗೋವುಗಳು ಸಾನಿಧ್ಯದಲ್ಲಿ 9 ದಿನ ಗೋವಾಸವಿದ್ದು, 9ನೇ ದಿನ ಗೋವುಗಳಿಂದ ಹಾಲನ್ನು ಕರೆದು ಪಂಚಗವ್ಯ ತಯಾರಿಸಿ ಅವುಗಳಿಂದ ದೇವಳದ ಆವರಣವನ್ನು ಸಂಪ್ರೋಕ್ಷಣೆ ಮಾಡಿ ಶುದ್ಧಿಗೊಳಿಸುವುದು. ಏಪ್ರಿಲ್ 9ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರ, ಭೋಜನ ಶಾಲೆ, ಆಡಳಿತ ಕಛೇರಿ ಹಾಗೂ ಸುಸಜ್ಜಿತ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಂಕು ಸ್ಥಾಪನೆ ಮಾಡುವುದೆಂದು ತೀರ್ಮಾನಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಸಭಾ ಕಾರ್ಯಕ್ರಮಗಳು ನೆರವೇರಲಿದೆ. ಈ ಸಭೆಯಲ್ಲಿ 9 ದಿನಗಳ ಪರ್ಯಂತ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಂತ್ರಿಗಳು ದಿನ ಹಾಗೂ ಸಮಯವನ್ನು ಘೋಷಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ನಡೆಯುವ ಅಮ್ಮನ ಬ್ರಹ್ಮಕಲಶೋತ್ಸವದ 9 ಜನರ ಪ್ರಧಾನ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಉದ್ಘಾಟನೆಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಆರ್ ಪಾಲನ್ ಇದ್ದರು.
