
ಬೆಂಗಳೂರು: ಇಲ್ಲಿನ ಪುಲಕೇಶಿ ನಗರದಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿಯ ಕಾರು ಅಡ್ಡಗಟ್ಟಿ ಕಿಡಿಗೇಡಿಗಳು ಕಿರುಕುಳ ನೀಡಿದ ಘಟನೆ ನಡೆದಿದೆ.
ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹರ್ಷಿಕಾ ಪೂಣಚ್ಚ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಪುಲಕೇಶಿನಗರದಲ್ಲಿ ಸಂಜೆ ರೆಸ್ಟೋರೆಂಟ್ ನಲ್ಲಿ ಕುಟುಂಬದೊಂದಿಗೆ ಊಟ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಕಾರಿನ ಬಳಿ ಇಬ್ಬರು ವ್ಯಕ್ತಿಗಳು ಪ್ರತ್ಯಕ್ಷರಾಗಿದ್ದಾರೆ.ಡ್ರೈವರ್ ಕಿಟಕಿಯ ಬಳಿ ನಿಂತು ನಿಮ್ಮ ಕಾರು ದೊಡ್ಡದಾಗಿದೆ. ಚಲಿಸಿದರೆ ನಮಗೆ ತಾಗಬಹುದು ಎಂದು ಕಿರಿಕ್ ಶುರು ಮಾಡಿದ್ದಾರೆ. ಇದಕ್ಕೆ ಭುವನ್ ಇನ್ನೂ ನಮ್ಮ ಕಾರು ಮೂವ್ ಮಾಡಿಲ್ಲ, ಸ್ವಲ್ಪ ಸೈಡು ಬಿಡಿ ಎಂದು ಕೇಳಿದ್ದಾರೆ. ಸ್ವಲ್ಪ ಮುಂದಕ್ಕೆ ಕಾರು ಚಲಿಸುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಅವರದ್ದೇ ಭಾಷೆಯಲ್ಲಿ ನಿಂದಿಸಲಾರಂಭಿಸಿದ್ದಾರೆ. ಇವರಿಗೆ ಪಾಠ ಕಲಿಸಬೇಕು ಎನ್ನುತ್ತಾ ನನ್ನ ಪತಿ ಭುವನ್ ಗೆ ಹೊಡೆಯಲು ಯತ್ನಿಸಿದ್ದಾರೆ. 2-3 ಜನರಿದ್ದವರು 20-30 ಜನರಷ್ಟು ಗುಂಪು ಸೇರಿದ್ದಾರೆ. ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದರು. ಭುವನ್ ಬಳಿ ಇದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಕಾರಿನ ಗಾಜು ಪುಡಿ ಪುಡಿ ಮಾಡಿದ್ದಾರೆ ಎಂದು ಹರ್ಷಿಕ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅಲ್ಲದೇ ಈ ಬಗ್ಗೆ ಸಮೀಪದಲ್ಲಿದ್ದ ಪೊಲೀಸರಿಗೆ ಹೇಳಿದರೂ ಅವರು ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ನಮ್ಮದೇ ನಗರ ಬೆಂಗಳೂರಿನಲ್ಲಿ ನಾವೆಷ್ಟು ಸುರಕ್ಷಿತ? ನಾವು ಪಾಕಿಸ್ತಾನದಲ್ಲಿದ್ದೇವಾ ಅಥವಾ ಅಪಘಾನಿಸ್ತಾನದಲ್ಲಿದ್ದೇವಾ? ಎಂಬ ಪ್ರಶ್ನೆ ಮೂಡಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
