
ಕುಂದಾಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯೋವರು ಮಹಿಳಾ ಡಾಕ್ಟರ್ಗೆ ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳ ನೀಡಿರುವ ಕುರಿತು ಪ್ರಕರಣ ದಾಖಲಾಗಿದ್ದು, ವೈದ್ಯಾಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಳೆದ ಏಳೆಂಟು ತಿಂಗಳಿನಿಂದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ಮಹಿಳಾ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ಇದರಿಂದ ಬೇಸತ್ತ ಮಹಿಳಾ ಡಾಕ್ಟರ್ ಇದೀಗ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ದೂರು ದಾಖಲಿಸಿಕೊಂಡು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಕರ್ತವ್ಯಕ್ಕೆ ಹೊಸದಾಗಿ ಸೇರಿದ್ದ ಈ ವೈದ್ಯೆಗೆ ಆರಂಭದಿಂದಲೇ ವಾಟ್ಸಾಪ್ನಲ್ಲಿ ನಿರಂತರ ಅಶ್ಲೀಲ ಚಾಟ್ ಮಾಡುತ್ತಾ, ಸ್ಟೇಟಸ್ನ ಫೋಟೊಗಳನ್ನು ಸೇವ್ ಮಾಡಿ ಅಶ್ಲೀಲ ಕಮೆಂಟ್ಗಳನ್ನು ಮಾಡುತ್ತಿದ್ದರು. ಅಲ್ಲದೇ ದುಬಾರಿ ಹೋಟೆಲ್ಗೆ ಕರೆಯುತ್ತಿದ್ದು, ವಿದೇಶದಲ್ಲಿ ಹೆಣ್ಣು ಮಕ್ಕಳೊಂದಿಗೆ ಇದ್ದ ಫೋಟೋವನ್ನು ಕಳುಹಿಸಿ ನೀನು ನನಗೆ ಸಹಕರಿಸು ಎನ್ನುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದೀಗ ಡಾ.ರಾಬರ್ಟ್ ರೆಬೆಲ್ಲೋ ಮೇಲೆ ಸಾರ್ವಜನಿಕರಿಂದ ಹಾಗೂ ಸಹ ಸಿಬ್ಬಂದಿ ವೈದ್ಯರಿಂದ ದೂರು ಬಂದ ಹಿನ್ನೆಲೆ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಡಾ.ಲತಾ ಅವರನ್ನು ನೇಮಿಸಲಾಗಿದೆ.
