
ಬೆಳ್ತಂಗಡಿ: ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದ ಅರಣ್ಯ ಇಲಾಖಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಧರ್ಮಸ್ಥಳ ಪೊಲೀಸರು ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಚಾರ್ಜ್ ಶಿಟ್ ಸಲ್ಲಿಕೆ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳಂಜೆ ಗ್ರಾಮದ ಲೋಲಾಕ್ಷ ಎಂಬಾತ ಮೀಸಲು ಅರಣ್ಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ್ದರು. ಇದನ್ನು ವಿರೋಧಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಬಿಜೆಪಿ ಕಾರ್ಯಕರ್ತರು ಅದೇ ಜಾಗದಲ್ಲಿ ಮತ್ತೆ ಮನೆ ನಿರ್ಮಾಣ ಮಾಡಿದ್ದರು. ನಂತರ ಆ ಮನೆಯನ್ನೂ ಕೂಡ ತೆರವುಗೊಳಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದ ಹಿನ್ನೆಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಗಲಾಟೆ ಸಂಭವಿಸಿತ್ತು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಒಟ್ಟು 17 ಮಂದಿಯ ವಿರುದ್ಧ ಬೆಂಗಳೂರು ಜನಪ್ರತಿನಿಧಿಗಳ ಕೋಟ್ ನಲ್ಲಿ ಜೂನ್.1 ರಂದು ಚಾರ್ಜ್ ಶಿಟ್ ಸಲ್ಲಿಸಿದ್ದಾರೆ.
ಇನ್ನು, ಶಾಸಕ ಹರೀಶ್ ಪೂಂಜಾ ವಿರುದ್ಧ ಬೇರೆ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಚಾಜ್ ಶೀಟ್ ಸಲ್ಲಿಕೆಯಾಗಿದ್ದು, ಇದೀಗ ಬೆಂಗಳೂರು ಜನಪ್ರತಿನಿಧಿಗಳ ಕೋಟ್ನಲ್ಲಿ ಮತ್ತೊಂದು ಚಾರ್ಜ್ ಶಿಟ್ ಸಲ್ಲಿಕೆಯಾಗಿದೆ.
