
ಕುಂದಾಪುರ: ಉತ್ತರಾಖಂಡಕ್ಕೆ ಚಾರಣಕ್ಕೆ ಹೋಗಿ ಅಲ್ಲಿ ಉಂಟಾದ ಹವಾಮಾನ ವೈಪರಿತ್ಯದಿಂದಾಗಿ ಮೃತಪಟ್ಟ ಕರ್ನಾಟಕದ 9ಮಂದಿಯ ಪೈಕಿ ಒಬ್ಬರಾದ ಪದ್ಮನಾಭ ಭಟ್(50) ಮೂಲತಃ ಕುಂದಾಪುರದ ಕುಂಭಾಶಿಯವರಾಗಿದ್ದಾರೆ. ಇಲ್ಲಿನ ಕೊರವಡಿ ರಸ್ತೆಯಲ್ಲಿರುವ ಶ್ರೀ ಹರಿಹರ ನಿಲಯ ಎನ್ನುವ ಮನೆ ಮೃತ ಪದ್ಮನಾಭ ಭಟ್ಟರ ಮೂಲ ಮನೆಯಾಗಿದೆ.
ಕೃಷ್ಣ ಮೂರ್ತಿ ಭಟ್ ಹಾಗೂ ಸತ್ಯವತಿ ದಂಪತಿಯ ಪುತ್ರರಾದ ಪದ್ಮನಾಭ ಭಟ್, ಸಿಎ ವ್ಯಾಸಂಗ ಮಾಡಿದ್ದರು. ಬಳಿಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಅವರು, ಆ ಸಂಸ್ಥೆಯ ವತಿಯಿಂದ ಅಮೇರಿಕಕ್ಕೆ ತೆರಳಿದ್ದರು. ನಂತರ ಅಲ್ಲಿನ ಸಿಪಿಎ ತೇರ್ಗಡೆಯಾದ ಅವರು ಮರಳಿ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯಲ್ಲಿ ಸೇವೆಯನ್ನು ಮುಂದುವರೆಸಿದ್ದರು. ಟ್ರೆಕ್ಕಿಂಗ್ ಪ್ರಿಯರಾಗಿದ್ದ ಪದ್ಮನಾಭ ಭಟ್,ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಾಖಂಡದ ಉತ್ತರ ಕಾಶಿಯ ಬೆಟ್ಟ ಪ್ರದೇಶಕ್ಕೆ ಟ್ರೆಕ್ಕಿಂಗ್ ಹೋಗಿದ್ದರು. ಪ್ರವಾಸ ಮುಗಿಸಿ ಜೂನ್ 4ರಂದು ಮಧ್ಯಾಹ್ನ 2 ಗಂಟೆಗೆ ಎಲ್ಲರೂ 15 ಸಾವಿರ ಅಡಿ ಎತ್ತರದಿಂದ ಕೆಳಗಿಳಿಯುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬೆಂಗಳೂರಿನ ಪದ್ಮನಾಭ ಭಟ್ಟರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ವಿಷಯ ತಿಳಿದು ಮೃತರ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರಿಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
