
ಕುಂದಾಪುರ: ಕಮಲಶಿಲೆ ದೇವಸ್ಥಾನದ ಗೋಶಾಲೆಯಲ್ಲಿ ಎದುರಿನ ಬಾಗಿಲಿನ ಬೀಗ ಮುರಿದು ಹಸು ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಶನಿವಾರ ತಡರಾತ್ರಿ 2.46ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಗೋಶಾಲೆಯ ಎದುರಿನ ಬಾಗಿಲ ಬೀಗ ಮುರಿದು ಬದಿಯ ಬಾಗಿಲ ಮೂಲಕ ನುಗ್ಗಿ ಮೂರು ಹಸುಗಳ ಹಗ್ಗವನ್ನು ಕತ್ತಿಯಿಂದ ಕಡಿದು ಸಾಗಾಟಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸೈನ್ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಸಿದೆ. 24 ಗಂಟೆಗಳ ಕಾಲ ಸಿಸಿಟಿವಿ ವೀಕ್ಷಿಸುತ್ತಾ ಯಾರಾದರೂ ಅನುಮಾನಾಸ್ಪದವಾಗಿ ತಿರುಗಾಡುವುದು ಕಂಡುಬಂದರೆ, ಕಳ್ಳತನ ಆಗುತ್ತಿದ್ದರೆ, ಸಂಶಯಾಸ್ಪದವಾಗಿ ಏನಾದರೂ ನಡೆದರೆ ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡುತ್ತಾರೆ. ಇದೇ ತಂತ್ರಜ್ಞಾನದ ನೆರವಿನಿಂದ ನಡೆಯಬೇಕಿದ್ದ ಕಳ್ಳತನ ತಪ್ಪಿಹೋಗಿದ್ದು, ಕಳ್ಳರ ಪ್ರಯತ್ನ ವಿಫಲವಾಗಿದೆ. ಸೈನ್ ಇನ್ ಸಿಸಿಟಿವಿಯನ್ನು ದೇವಸ್ಥಾನದ ವತಿಯಿಂದ ಅಳವಡಿಸಲಾಗಿತ್ತು.
ಇನ್ನು, ಘಟನಾ ಸ್ಥಳಕ್ಕೆ ಎಸ್‌ಐ ಹಾಗೂ ಕುಂದಾಪುರ ಡಿವೈಎಸ್‌ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಶಂಕಿತರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
