
ಉಡುಪಿ: ಹಳೇ ವೈಷಮ್ಯದ ಹಿನ್ನೆಲೆ ತಲವಾರು ಬೀಸಿ ಸೆಲೂನ್‌ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಉಡುಪಿಯ ಪುತ್ತೂರಿನ ಸೆಲೂನ್‌ವೊಂದರಲ್ಲಿ ನಡೆದಿದೆ.
ಚರಣ್.ಯು(18) ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ.
ಜೂನ್.೧೫ರಂದು ಚರಣ್ ಸೆಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಅಭಿ ಕಟಪಾಡಿ ಎನ್ನುವವನು ಕರೆ ಮಾಡಿ ಶಬರಿ ಎನ್ನುವವನ ಬಗ್ಗೆ ಮಾತನಾಡಲು ಕೂಡಲೇ ಪುತ್ತೂರಿನ ಬಿರಿಯಾನಿ ಪಾಯಿಂಟ್‌ಗೆ ಬರಲು ಹೇಳಿದ್ದಾನೆ. ಈ ಹಿನ್ನೆಲೆ ಚರಣ್, ಸುಜನ್ ಎಂಬಾತನ ಬೈಕ್ ನಲ್ಲಿ ತೆರಳಿದ್ದರು. ಇವರ ಗೆಳೆಯರಾದ ನಾಗರಾಜ್, ಕಾರ್ತಿಕ್, ರಂಜು ಅವರು ಮತ್ತೂಂದು ಸ್ಕೂಟಿಯಲ್ಲಿ ಹೊರಟು ಬಿರಿಯಾನಿ ಪಾಯಿಂಟ್ ಗಿಂತ ಸ್ವಲ್ಪ ಮುಂದೆ ಗೂಡಂಗಡಿ ಬಳಿಗೆ ತೆರಳಿದ್ದರು. ಈ ವೇಳೆ ಕೈಯಲ್ಲಿ ತಲವಾರನ್ನು ಹಿಡಿದುಕೊಂಡು ಅಲ್ಲಿಯೇ ನಿಂತಿದ್ದ ರಿಕ್ಷಾಕ್ಕೆ ಒರಗಿ ನಿಂತಿದ್ದ ಅಭಿ ಕಟಪಾಡಿ, ಶಬರಿ ಹಾಗೂ ಇನ್ನಿತರ ಸಹಚರರು ಚರಣ್ ಹಾಗೂ ಅವನ ಸ್ನೇಹಿತರನ್ನು ನೋಡಿದ ತಕ್ಷಣ ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿದ್ದು, ಅವರು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಈ ವೇಳೆ ಅವರಿಗೆ ಬಿಯರ್ ಬಾಟಲಿಗಳನ್ನು ಬಿಸಾಡಿದ್ದು, ಅಲ್ಲಿಯೇ ಬಿಟ್ಟು ಹೋಗಿದ್ದ ಬೈಕ್ ಮತ್ತು ಸ್ಕೂಟಿಗೆ ಹಾನಿಗೊಳಿಸಿ 25 ಸಾವಿರ ರೂ. ನಷ್ಟ ಉಂಟುಮಾಡಿದ್ದಾರೆ.
ಈ ಬಗ್ಗೆ ಚರಣ್ ಉಡುಪಿ ನಗರ ಠಾಣೆಯಲ್ಲಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಚರಣ್, ಶಬರಿ ಎಂಬಾತನಿಗೆ ನಿಂದಿಸಿದ ಹಾಗೂ ಹಳೇ ವೈಷಮ್ಯದ ಹಿನ್ನೆಲೆ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಗ್ಯಾಂಗ್ ವಾರ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಉಡುಪಿಯಲ್ಲಿ ಹೆಚ್ಚುತ್ತಿರುವ ಗ್ಯಾಂಗ್ ವಾರ್‌ನಿಂದಾಗಿ ಜನರು ಭಯಭೀತರಾಗಿದ್ದಾರೆ.
