
ಕುಂದಾಪುರ: ತಾಯಿಯ ಎದೆ ಹಾಲು ಕುಡಿದ ಕೆಲವೇ ಕ್ಷಣಗಳಲ್ಲಿ 43 ದಿನದ ಮಗು ಸಾವನ್ನಪ್ಪಿದ ಘಟನೆ ಗಂಗೊಳ್ಳಿಯ ಗುಜ್ಜಾಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಗುಜ್ಜಾಡಿ ಗ್ರಾಮದ ನೇತ್ರಾವತಿ ಎಂಬುವವರ ಮಗು ಸಾವನ್ನಪ್ಪಿದ್ದು, ಮಂಗಳವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಾಯಿ ನೇತ್ರಾವತಿ ಎದೆ ಹಾಲು ಕುಡಿಸಿ ರೂಮಿನಿಂದ ಹೊರಬಂದಿದ್ದಾರೆ. ಈ ವೇಳೆ ಅಜ್ಜ ಲಕ್ಷ್ಮಣ ಮಗುವನ್ನು ನೋಡಲು ಒಳಗೆ ಹೋಗಿದ್ದು, ಮಗು ಉಸಿರಾಡದೇ ಇರುವುದನ್ನು ಕಂಡ ಅಜ್ಜ ಲಕ್ಷ್ಮಣ ಅನುಮಾನಗೊಂಡು ಮಗುವನ್ನು ಮುಟ್ಟಿ ನೋಡಿದಾಗ ಮಗುವಿನ ಮೈ ತಣ್ಣಗಾಗಿತ್ತು. ತಕ್ಷಣವೇ ಮಗುವನ್ನು ಕರೆದುಕೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅದಾಗಲೇ ಮಗು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು, ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
