
ಇಂದು ಮಕ್ಕಳನ್ನು ಹೊರ ಆಟಕ್ಕಿಂತ ಒಳಾಂಗಣ ಆಟಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡುತ್ತಾರೆ. ಅದರಲ್ಲೂ ಓದು, ಪರೀಕ್ಷೆ ಒತ್ತಡ, ಟ್ಯೂಷನ್, ಇತ್ಯಾದಿಯಲ್ಲೇ ಕಾಲ ಕಳೆಯುವ ಮಕ್ಕಳಿಗೆ ಮನೋರಂಜನೆಗಾಗಿ ಮಾಲ್‌ಗಳಿಗೆ ಹೋಗಿ ಅಲ್ಲಿ ಆಟಿಕೆಗಳ ಜೊತೆ ಮಕ್ಕಳನ್ನು ಆಟವಾಡಿಸುತ್ತಾರೆ. ಆದರೆ ಈ ಆಟಿಕೆಗಳು ಕೆಲವೊಮ್ಮೆ ಮಕ್ಕಳ ಜೀವಕ್ಕೆ ತೊಂದರೆ ಉಂಟು ಮಾಡಬಹುದು. ಇಂತಹ ಘಟನೆಯೊಂದು ಚಂಡೀಗಢ್ ನ ಮಾಲ್‌ನಲ್ಲಿ ನಡೆದಿದ್ದು, ಆಟಿಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಟಿಕೆ ರೈಲಿನ ಬೋಗಿ ಉರುಳಿಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಹೌದು, ಈ ವಿಡಿಯೋ ನೋಡಿ ಇದೀಗ ಪೋಷಕರು ಕಂಗಲಾಗಿದ್ದಾರೆ. ಇಂದು ಮಕ್ಕಳನ್ನು ಮಾಲ್ ಗೆ ತೆರಳಿ ಆಟವಾಡಿಸುವ ಪೋಷಕರಿಗೆ ಇದು ಒಂದು ಪಾಠ ಎಂದೇ ಹೇಳಬಹುದು.
ಶಹಬಾಜ್ (10 ವರ್ಷ) ಸಾವನಪ್ಪಿದ ಬಾಲಕ. ಈತ ತನ್ನ ಕುಟುಂಬದವರ ಜೊತೆ ಮಾಲ್ ಗೆ ಬಂದಿದ್ದಾನೆ. ಜೊತೆ ಕುಳಿತಿದ್ದ ಆತನ ಸೋದರ ಸಂಬಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಬಾಲಕ ಕೊನೆಯ ಕಂಪಾರ್ಟ್ ಮೆಂಟ್‌ನಲ್ಲಿ ಕುಳಿತಿದ್ದು, ಟಾಯ್ ಟ್ರೈನ್ ತಿರುವು ಪಡೆಯುತ್ತಿದ್ದಂತೆ ಮಗುಚಿ ಬಿದ್ದಿದ್ದು, ಬಾಲಕನ ತಲೆಗೆ ತೀವ್ರ ಪೆಟ್ಟಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಆತ ಕಿಟಕಿಯಿಂದ ಹೊರಗೆ ವಾಲಿದ್ದು ಆಗ ರೈಲು ತಿರುವು ಪಡೆಯುತ್ತಿದ್ದಾಗ ಪಲ್ಟಿಯಾಗಿ ಬಿದ್ದು ಬಾಲಕನ ತಲೆಗೆ ತೀವ್ರವಾದ ಪೆಟ್ಟಾಗಿದೆ. ಇದರಿಂದ ಆತ ಸಾವನಪ್ಪಿದ್ದಾನೆ ಎನ್ನಲಾಗಿದೆ.
ರೈಲನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯ ವಿರುದ್ಧ ಮತ್ತು ಮಾಲ್‌ನ ನಿರ್ವಹಣೆ ಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
