
ಚಿಕ್ಕಮಗಳೂರು ಎಂದಾಕ್ಷಣ ನೆನಪಾಗುವುದೇ ಪಶ್ಚಿಮ ಘಟ್ಟಗಳ ಸಾಲು, ಸುಂದರ ಕಾಫಿ ತೋಟ, ಹೀಗೇ ಹೇಳುತ್ತಾ ಹೋದರೆ ಚಿಕ್ಕಮಗಳೂರಿನ ಸೌಂದರ್ಯವನ್ನ ವೃರ್ಣಿಸಲು ಅಸಾಧ್ಯ. ಇಲ್ಲಿರುವ ಆಕರ್ಷಣೀಯ ತಾಣಗಳು ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಚಿಕ್ಕಮಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಜನಜಾತ್ರೆಯಿಂದ ತುಂಬಿರುತ್ತದೆ. ಅದರಲ್ಲೂ ಹೆಸರೇ ಹೇಳುವಂತೆ ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ ಅತೀ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದಿದ್ದು, ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆ. ಮಳೆಗಾಲದಲ್ಲಿ ಇಲ್ಲಿ ಜನ ಸಂದಣಿ ಹೆಚ್ಚು. ಆದರೆ ಇನ್ಮುಂದೆ ಪ್ರವಾಸಿಗರು ಮುಳ್ಳಯ್ಯನಗಿರಿ ನೋಡಲು ನೇರವಾಗಿ ಬರುವಂತಿಲ್ಲ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಅವಕಾಶ ಸಿಕ್ಕರೆ ಮಾತ್ರ ಭೇಟಿ ಮಾಡಬಹುದು.
ಹೌದು, ವಾಹನ ದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇದೀಗ ಇಲ್ಲಿನ ಜಿಲ್ಲಾಡಳಿತ ಆನ್‌ಲೈನ್ ನೋಂದಣಿ ವ್ಯವಸ್ಥೆ ಜಾರಿ ಮಾಡಿದ್ದು, ಶುಲ್ಕ ಪಾವತಿಸಿ ಮೊದಲೇ ನೋಂದಣಿ ಮಾಡಿಸಿಕೊಂಡ ವಾಹನಗಳನ್ನು ಮಾತ್ರ ಇಲ್ಲಿಗೆ ಬಿಡಲಾಗುವುದು ಎಂದು ತಿಳಿಸಿದೆ. ಹಾಗಾಗಿ ಈ ವಾರಾಂತ್ಯದಿಂದಲೇ ಆನ್‌ಲೈನ್ ನೋಂದಣಿ ಆರಂಭಿಸಲು ತಯಾರಿ ನಡೆಸಿದೆ.
ಆನ್ ಲೈನ್ ನೋಂದಾಣಿ ಮಾಡೋದು ಹೇಗೆ..?
ಒಂದು ದಿನಕ್ಕೆ 600 ವಾಹನಗಳಿಗೆ ಮಾತ್ರ ಅವಕಾಶ ಇರಲಿದ್ದು, ಬೆಳಿಗ್ಗೆ 300 ಮತ್ತು ಮಧ್ಯಾಹ್ನ 300 ವಾಹನಗಳು ಸೇರಿ ಮೊದಲ ಹಂತದಲ್ಲಿ ದಿನಕ್ಕೆ 600 ವಾಹನಗಳಿಗೆ ಸೀಮಿತ ಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ನೋಂದಣಿ ಮಾಡಲು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ಗಳಲ್ಲಿ ಮತ್ತು ಜಿಲ್ಲೆಯ ಎಲ್ಲಾ ಸಂಪರ್ಕ ರಸ್ತೆಗಳಲ್ಲಿ ಕ್ಯೂಆರ್ ಕೋಡ್ ಆಧರಿತ ಫಲಕ ಅಳವಡಿಸಲಿದ್ದು, ಈ ಕ್ಯೂಆರ್ ಕೋಡ್ ಬಳಿಸಿ ನೋಂದಣಿ ಮಾಡಬಹುದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರವಾಸ ಟ್ರಕ್ಕಿಂಗ್ ಪ್ರಿಯರಿಗೆ ನಿರಾಸೆ
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್, ಪೋಲಿಸ್ ಇಲಾಖೆ ಜೊತೆಯು ಸಭೆ ನಡೆಸಿದೆ. ಇದೀಗ ಈ ನೋಂದಣಿ ವಿಚಾರ ಟ್ರಕ್ಕಿಂಗ್ ಪ್ರಿಯರಿಗೆ ನಿರಾಸೆ ಉಂಟು ಮಾಡಿದೆ. ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡಲು ಪ್ಲಾನ್ ಮಾಡಿರುತ್ತಾರೆ. ಇದೇ ಸಂದರ್ಭದಲ್ಲಿ ಚಾರಣಕ್ಕೆ ನಿಷೇಧ ಹೇರಿದ್ದು, ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿದೆ.
