
ಅಯೋಧ್ಯೆ ರಾಮ ಮಂದಿರದಲ್ಲಿ ಈಗಾಗಲೇ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದು ಭವ್ಯ ಮಂದಿರವನ್ನು ಲಕ್ಷಾಂತರ ಜನ ಕಣ್ತುಂಬಿ ಕೊಂಡಿದ್ದಾರೆ. ಇದೀಗ ಹಿಂದಿಗಿಂತಲೂ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಅಯೋಧ್ಯೆ ಇದೀಗ ಮತ್ತಷ್ಟು ಆಕರ್ಷಿತವಾಗುತ್ತಿದೆ. ಹೌದು, ಅಯೋಧ್ಯೆಯಲ್ಲಿ ದೇವಾಲಯಗಳ ಮ್ಯೂಸಿಯಂ ನಿರ್ಮಾಣ ಮಾಡಲು ಟಾಟಾ ಸನ್ಸ್ ಮುಂದಾಗಿದೆ.
ಟಾಟಾ ಗ್ರೂಪ್ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೇವಾಲಯಗಳ ಮ್ಯೂಸಿಯಂ ನಿರ್ಮಿಸಲು ಪ್ಲಾನ್ ಮಾಡಿದ್ದು, 650 ಕೋಟಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣ ಮಾಡಲಿದೆ. ಈಗಾಗಲೇ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್ ಅನುಮೋದನೆ ಕೂಡ ನೀಡಿದೆ. ಈ ಮ್ಯೂಸಿಯಂ ಕುರಿತಾಗಿ ಕಳೆದ ವರ್ಷ ಪ್ರಸ್ತಾವನೆ ಬಂದಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಚಾರವಾಗಿ ಚರ್ಚಿಸಿದ್ದಾರೆ. ಈ ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಈಗಾಗಲೇ ವಿವರಿಸಿದ್ದು, ಮ್ಯೂಸಿಯಂನ ಈ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿದ್ದಾರೆ ಎನ್ನಲಾಗಿದೆ.
ಭಾರತೀಯ ದೇವಾಲಯಗಳ ಇತಿಹಾಸ ಸಾರಲಿದೆ
ಈ ಮ್ಯೂಸಿಯಂ ನಲ್ಲಿ ಭಾರತದ ಪ್ರಸಿದ್ಧ ದೇವಾಲಯಗಳ ಇತಿಹಾಸ ಸಾರಲಿದ್ದು, ವಾಸ್ತುಶಿಲ್ಪದ ಕುರಿತು ಮ್ಯೂಸಿಯಮ್ ನಲ್ಲಿ ಮಾಹಿತಿ ಸಿಗಲಿದೆ. ಇದರಿಂದ ಭಾರತೀಯ ದೇವಾಲಯಗಳ ತಿಳುವಳಿಕೆ, ಆಚಾರ, ವಿಚಾರ, ಪದ್ದತಿ ಇತರ ಪ್ರವಾಸಿಗರಿಗೂ ತಿಳಿಯಲಿದೆ. ದೇವಾಲಯದ ವಸ್ತು ಸಂಗ್ರಹಾಲಯಗಳಲ್ಲಿ ಬೆಳಕು ಧ್ವನಿ ಪ್ರದರ್ಶನದ ಸೌಲಭ್ಯ ಕೂಡ ಇರಲಿದ್ದು, ಅಯೋಧ್ಯೆ ನಗರದ ಇತರೆ ಅಭಿವೃದ್ಧಿ ಕಾಮಗಾರಿಗಳ ಮೇಲೆಯೂ ಟಾಟಾ ಗ್ರೂಪ್‌ನಿಂದ 100 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ.
