
ಉಡುಪಿ: ಉಡುಪಿ ನಗರದ ಭುಜಂಗ ಪಾರ್ಕ್ನಲ್ಲಿದ್ದ ನಾಲ್ಕೈದು ಮರಗಳನ್ನು ಯಾವುದೇ ಅನುಮತಿ ಇಲ್ಲದೇ ಕಡಿದು ಹಾಕಿದ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಪೌರಾಯುಕ್ತರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು 25ಸಾವಿರ ರೂ. ದಂಡ ವಿಧಿಸಿದ ಘಟನೆ ನಡೆದಿದೆ.
ಪಾರ್ಕ್ ನಲ್ಲಿದ್ದ ಅನೇಕ ಮರಗಳನ್ನು ಕಡಿಯುವ ಉದ್ದೇಶದಿಂದ ಇಂದು ಬೆಳಗ್ಗೆ ಮರಗಳನ್ನು ಕಡಿಯಲು ಪ್ರಾರಂಭಿಸಿದ್ದರು. ಅಲ್ಲದೇ ಅಪಾಯಕಾರಿ ಮರಗಳೆಂಬ ಕಾರಣ ನೀಡಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್ ಎಂಬವರ ಸೂಚನೆಯಂತೆ ಕಾರ್ಮಿಕರು ಮೂರ್ನಾಲ್ಕು ಮರಗಳನ್ನು ಕಡಿದಿದ್ದರು. ಇದಕ್ಕೆ ಪಾರ್ಕ್ನಲ್ಲಿ ವಿಹರಿಸುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಹೀಗಾಗಿ ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ ಮರ ಕಡಿಯುವುದನ್ನು ತಡೆದರು. ಈ ವೇಳೆ ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೇ ಮರ ಕಡಿದುರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಿದ್ದು, ಗುತ್ತಿಗೆದಾರ ಕೂಡಲೇ ದಂಡ ಪಾವತಿಸಿದ್ದಾರೆ.
ಗಿಡ ನೆಡಿಸಿದ ಪೌರಾಯುಕ್ತರು
ಇಷ್ಟೇ ಅಲ್ಲದೇ ಒಂದು ಮರದ ಬದಲು 10 ಗಿಡಗಳನ್ನು ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದ್ದು, ಇಂದು ಮಧ್ಯಾಹ್ನದ ಒಳಗೆಯೇ ಕಡಿದ ಮರಗಳ ಜಾಗದಲ್ಲಿ ಹಲವು ಗಿಡಗಳನ್ನು ನಡೆಸಿದ್ದಾರೆ. ಪೌರಾಯುಕ್ತರ ಈ ನೆಡೆಗೆ ಉಡುಪಿ ಜನತೆ ಶಹಬ್ಬಾಷ್ ಎಂದಿದ್ದಾರೆ.
