
ಉಡುಪಿ:ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳೀಂದ ಭಾರೀ ಮಳೆಯಾಗುತ್ತಿದೆ. ನೆರೆ ನೀರು ಮನೆ, ದೇವಾಲಯಗಳನ್ನು ಹೊಕ್ಕಿವೆ. ಈ ನಡುವೆ ಮಳೆ ಹೆಚ್ಚಿರುವ ಪ್ರದೇಶಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ವ್ಯಾಪಕ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯ ಮೂರು ತಾಲೂಕಿನ ಶಾಲಾ-ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಮೂರು ತಾಲೂಕುಗಳಾದ ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರಿನ ಶಾಲಾ-ಕಾಲೇಜಿಗೆ ರಜೆ ನೀಡಿ ಕುಂದಾಪುರ ಎಸಿ ರಶ್ಮಿ ಎಸ್.ಆರ್ ಅವರು ಆದೇಶಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಜಿಲ್ಲೆಯಾದ್ಯಂತ ಪದವಿ, ಸ್ನಾತಕೋತ್ತರ ಪದವಿ ಕಾಲೇಜು, ಡಿಪ್ಲೊಮ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜಿಗೆ ರಜೆ ಇಲ್ಲ ಎಂದು ತಿಳಿಸಲಾಗಿದೆ.
ಇನ್ನು, ಉತ್ತರ ಕನ್ನಡ ಜಿಲ್ಲೆಯಲ್ಲೂ ಕೂಡ ಭಾರೀ ಮಳೆ ಹಿನ್ನೆಲೆ ಕುಮಟಾ ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ. ಅಗತ್ಯ ಬಿದ್ದಲ್ಲಿ ಹೊನ್ನಾವರ ತಾಲೂಕಿ ಶಾಲಾ-ಕಾಲೇಜಿಗೂ ರಜೆ ಘೋಷೀಸುವಂತೆ ಸೂಚಿಸಲಾಗಿದೆ.
