
ಉಡುಪಿ: ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನಲ್ಲಿ ಮಂಗಳವಾರ ನಡೆದಿದೆ.
ನಾಗೂರು ಗ್ರಾಮದ ಒಡೆಯರ ಮಠದ ವಿಶ್ವನಾಥ ಉಡುಪ ಎನ್ನುವವರ ಮನೆಯ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಬಾವಿಗೆ ಬಲೆ ಹಾಕುವುದರ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳಕ್ಕೆ ಬೈಂದೂರು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಕಂದಾಯ ಇಲಾಖೆಯವರು ದೌಡಾಯಿಸಿದ್ದು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಮೊಸಳೆಯನ್ನು ಬಾವಿಯಿಂದ ಹೊರತೆಗೆಯಲು ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ಹಿಡಿಯಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಬೋನಿಗೆ ಕೋಳಿಯ ಮಾಂಸವನ್ನು ಹಾಕಿ ಇಡಲಾಗಿದೆ.
ನಾಗೂರು ನೆಟ್ ವರ್ಕ್ ಅಂಡ್ ಸೆಕ್ಯೂರಿಟಿ ಸೊಲ್ಯೂಷನ್ಸ್ ಇವರ ಸಹಕಾರದೊಂದಿಗೆ ಬಾವಿಯ ಸುತ್ತಲೂ ಸಿಸಿ ಕ್ಯಾಮರಾವನ್ನು ಅಳವಡಿಸಿ ಕಂಪ್ಯೂಟರ್ ಮೂಲಕ ಮೊಸಳೆಯ ಓಡಾಟವನ್ನು ಗಮನಿಸಲಾಗುತ್ತಿದೆ. ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಮೊಸಳೆ ನೋಡಲು ಸಾವಿರಾರು ಜನರು ಮೊಸಳೆ ನೋಡಲು ಧಾವಿಸುತ್ತಿದ್ದು, ಜನರನ್ನು ತಡಯಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಇನ್ನು, ಬೈಂದೂರು ತಹಶೀಲ್ದಾರ್ ಪ್ರದೀಪ್, ಪಿಎಸ್ಐ ತಿಮ್ಮೇಶ್ ಬಿ.ಎನ್., ಅರಣ್ಯಾಧಿಕಾರಿ ಸಂದೇಶ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
