
ಮುಖದಲ್ಲಿ ಮೊಡವೆಗಳಾದಲ್ಲಿ ಅದರ ನಿವಾರಣೆಗೆ ಹಲವಾರು ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ನಾವು ಮೊಡವೆ ನಿವಾರಣೆಗೆ ವೈದ್ಯರ ಬಳಿ ಹೋಗುವುದು ಆ ಕ್ರೀಂ ಈ ಕ್ರೀಂ ಅಂತಾ ಹಚ್ಚಿಕೊಳ್ಳುವುದು ಇವೆಲ್ಲಾ ಮಾಡುವುದರಿಂದ ಮೊಡವೆ ನೀವಾರಣೆಯಾಗುವ ಬದಲು ಅದು ಹೆಚ್ಚುತ್ತಾ ಹೋಗುತ್ತದೆ. ಕೆಲವರಿಗೆ ಮೊಡವೆಯನ್ನು ಚಿವುಟಿಕೊಳ್ಲುವ ಅಭ್ಯಾಸ ಇರುತ್ತದೆ. ಈ ರೀತಿ ಮಾಡುವುದರಿಂದ ಮೊಡವೆ ಕಲೆಯಾಗುತ್ತದೆ. ಮತ್ತೆ ಇನ್ನೊಂದು ಜಾಗದಲ್ಲಿ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಮೊಡವೆ ನಿವಾರಣೆ ಮಾಡಲು ಇಂತಹ ಮಾರ್ಗಗಳನ್ನು ಉಪಯೋಗಿಸುವ ಬದಲು ಅದು ಕಲೆಯಾಗದ ರೀತಿಯಲ್ಲಿ ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಮುಖದಲ್ಲಿ ಮೊಡವೆಯಾದರೆ, ಅದರ ನೋವಿಗೆ ಅದನ್ನು ಚಿವುಟುವುದೋ, ಕೆರೆಯುವುದೋ, ಉಜ್ಜುವುದು ಮಾಡುತ್ತಿದ್ದಲ್ಲಿ, ಮೊದಲು ಅದನ್ನು ನಿಲ್ಲಿಸಬೇಕು. ಮೊಡವೆಯಲ್ಲಿ ಕೀವು ತುಂಬಿ ಕೆಂಪಗಾದರೂ ನೀವು ಒಡೆಯದೇ ಹಾಗೆಯೇ ಬಿಟ್ಟುಬಿಡಬೇಕು ಹೀಗೆ ಮಾಡಿದಾಗ ನಿಧಾನವಾಗಿಯೇ ಅದು ನಿವಾರಣೆಯಾಗುತ್ತದೆ.
ಮೊಡವೆಯಾದಾಗ ಅದನ್ನು ಚಿವುಟುವ ಬದಲು, ಮೃದುವಾಗಿ ಸ್ವಚ್ಛಗೊಳಿಸಬೇಕು. ಮೊಡವೆಯ ಗುಳ್ಳೆ ಒಡೆಯುವ ಹಾಗೆ ತುಂಬಾ ಗಟ್ಟಿಯಾಗಿ ಉಜ್ಜಬಾರದು. ಮುಖ ತೊಳೆದ ನಂತರ ಹತ್ತಿಯ ಬಟ್ಟೆಯಿಂದ ನಿಧಾನವಾಗಿ ಒರೆಸಬೇಕು. ಮೊಡವೆಯಾಗಿದ್ದಾಗ ಉರಿಯೂತ ಕಾಣಿಸಿಕೊಳ್ಳುವುದು ಸಹಜ. ಮೊಡವೆಯು ನೋಯುತ್ತಿದ್ದರೆ ಅದನ್ನು ಕೀಳಬಾರದು, ಮನೆಯಲ್ಲೇ ಸಿಗುವ ಐಸ್ ಕ್ಯೂಬ್ ಅನ್ನು ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ಅಥವಾ ಐಸ್ ಪ್ಯಾಕ್ ಅನ್ನು ಮೊಡವೆಯಿರುವ ಜಾಗದಲ್ಲಿ ನಿಧಾನವಾಗಿ ಇಡಬೇಕು. ಈ ರೀತಿ ಮಾಡುವುದರಿಂದ ಇದು ನೋವನ್ನು ಕಡಿಮೆ ಮಾಡುತ್ತದೆ.
