
ಉಡುಪಿ: ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯಕ್ಷಗಾನ ಅಕಾಡೆಮಿಯು ಸರಕಾರದ ನಿಯಮಾನುಸಾರ ಒಬ್ಬ ಗಣ್ಯರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಾಗೂ 5 ಜನ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಗಣ್ಯರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಿಗೆ 1 ಲ.ರೂ.ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಹಾಗೂ ಫಲ ತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು ಎಂದರು.
ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್.ಮಾತನಾಡಿ, ಗೌರವ ಪ್ರಶಸ್ತಿಗೆ ದಿನೇಶ್ ಅಮ್ಮಣ್ಣಾಯ, ನಾರಾಯಣಪ್ಪ ಎ.ಆರ್., ಎಂ.ಜಬ್ಬಾರ್ ಸಮೋ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆನ್ನಪ್ಪ ಗೌಡ ಸಜಿಪ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ರೂ.ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ ಶಾಲು, ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ರಘುನಾಥ ಶೆಟ್ಟಿ ಬಾಯಾರು, ದಿವಾಕರದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ ಮರಕಾಲ, ಶಿರಳಗಿ ತಿಮ್ಮಪ್ಪ ಹೆಗಡೆ, ಬಾಬು ಕುಲಾಲ್ ಹಳ್ಲಾಡಿ, ಶಿವಯ್ಯ, ಜೀಯಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ 25 ಸಾವಿರ ರೂ.ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ.
ದತ್ತಿನಿಧಿ ಪ್ರಶಸ್ತಿಗೆ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಗೋಪಾಲಕೃಷ್ಣ ಭಟ್ ಜೋಗಿಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ, ಹಾರ, ಶಾಲು, ಪೇಟ ಹಾಗೂ ಫಲ ತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.
2022ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ವಿದ್ವಾನ್ ಗಣಪತಿ ಭಟ್, ಡಾ ಮನೋರಮಾ ಬಿ.ಎನ್. ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಡಾ. ಸತೀಶ್ ಜಿ.ನಾಯ್ಕ, ಎಚ್.ಸುಜಯೀಂದ್ರ ಹಂದೆ ಅವರನ್ನು ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ 25 ಸಾವಿರ ರೂ.ಗಳ ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ, ಹಾರ, ಶಾಲು, ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 2ನೇ ಅಥವಾ 3ನೇ ವಾರದಲ್ಲಿ ಮಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇಲಾಖೆಯ ಸಚಿವರು, ಉಸ್ತುವಾರಿ ಸಚಿವರು ಹಾಗೂ ಶಾಸಕರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಕಾಡೆಮಿ ಸದಸ್ಯರಾದ ಜಿವಿಎಸ್ ಉಳ್ಳಾಲ್, ವಿದ್ಯಾಧರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
