
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಗೆ ಪತ್ರ ಬರೆದಿದ್ದಾರೆ.
ಸೆ.16 ರಂದು ಮೆಟ್ರೋದಲ್ಲಿ ಪ್ರಯಾಣಿಸಲು ಬಂದ ತಾಯಿಯೊಬ್ಬರು ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ಜಾಗ ಸಿಗದೆ, ಕೊನೆಗೆ ತಾಯಿ ನಿಲ್ದಾಣದ ಪ್ಲಾಟ್ಫಾರಂನಲ್ಲಿ ಮರೆಯಲ್ಲಿ ಹಾಲುಣಿಸಿದರು.
ತಾಯಿ ಮಗುವಿಗೆ ಹಾಲುಣಿಸಲು ಪರದಾಡಿದ ವಿಡಿಯೋ ವೈರಲ್ ಆಗಿತ್ತು.
ಈ ವಿಚಾರ ತಿಳಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬಿಎಂಆರ್ಸಿಎಲ್ಗೆ ಪತ್ರ ಬರೆದು ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪನೆ ಮಾಡುವಂತೆ ಸೂಚಿಸಿದ್ದಾರೆ.
ನಿರ್ಭಯಾ ಯೋಜನೆಯಡಿ ಕೇಂದ್ರ ಸರ್ಕಾರ ದೇವಸ್ಥಾನ, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪನೆ ಮಾಡಿದೆ. ಇದೀಗ ನಮ್ಮ ಮೆಟ್ರೋ ನಿಲ್ದಾಣದಲ್ಲೂ ಆರೈಕೆ ಕೇಂದ್ರ ಸ್ಥಾಪಿಸುವಂತೆ ಸೂಚಿಸಿದ್ದಾರೆ.
